‘ಏಕತಾ ಓಟ’ : ಸರ್ದಾರ್ ಪಟೇಲ್ ತ್ಯಾಗ, ದೇಶಭಕ್ತಿ ಯುವಜನತೆಗೆ ಸ್ಫೂರ್ತಿ: ಅಮಿತ್ ಶಾ
ನವದೆಹಲಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ತ್ಯಾಗ, ದೇಶಭಕ್ತಿ ಮತ್ತು ರಾಷ್ಟ್ರದ ಏಕತೆಗಾಗಿ ಅವರು ನೀಡಿದ ಕೊಡುಗೆಗಳು ಇಂದಿನ ಯುವಜನತೆಗೆ ಸ್ಫೂರ್ತಿಯಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಿದ್ದ ‘ಏಕತಾ ಓಟ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುವ ಪರಂಪರೆ ಆರಂಭವಾಯಿತು ಎಂದು ತಿಳಿಸಿದರು.
ಭಾರತದ ಇತಿಹಾಸ ಮಾತ್ರವಲ್ಲದೆ, ದೇಶದ ಭೌಗೋಳಿಕ ಸ್ವರೂಪವನ್ನೂ ಬದಲಿಸಿದ ಮಹಾನ್ ನಾಯಕ ಸರ್ದಾರ್ ಪಟೇಲ್. ಸ್ವಾತಂತ್ರ್ಯಾನಂತರ ಹಲವು ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತದ ನಿರ್ಮಾಣಕ್ಕೆ ಅವರು ಶ್ರಮಿಸಿದರು. ರಾಜಕೀಯ, ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕೀಕರಣದಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಅಮಿತ್ ಶಾ ಸ್ಮರಿಸಿದರು.

ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶ ಒಗ್ಗಟ್ಟಾಗಿ ಉಳಿಯುವುದಿಲ್ಲ ಎಂದು ಜಾಗತಿಕ ರಾಜಕೀಯ ತಜ್ಞರು ಭವಿಷ್ಯ ನುಡಿದಿದ್ದರು. ಆದರೆ, ಸ್ವಾತಂತ್ರ್ಯಾನಂತರದ ಕೇವಲ 1,218 ದಿನಗಳಲ್ಲಿ ಅಸಾಧ್ಯವೆನಿಸಿದ್ದ ಕಾರ್ಯವನ್ನು ಸರ್ದಾರ್ ಪಟೇಲ್ ಸಾಧಿಸಿದರು ಎಂದು ಅವರು ಹೇಳಿದರು.
ಹಲವು ಸಂಸ್ಥಾನಗಳನ್ನು ಒಗ್ಗೂಡಿಸುವ ಮೂಲಕ ಏಕತೆಯ ಭಾರತವನ್ನು ನಿರ್ಮಿಸಿದ ಪಟೇಲ್, ದೇಶವು ಜಗತ್ತಿನ ಮುಂದೆ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದರು ಎಂದು ಅಮಿತ್ ಶಾ ಬಣ್ಣಿಸಿದರು.