ಗಾಜಿಯಾಬಾದ್ ಪೊಲೀಸ್ ಔಟ್ಪೋಸ್ಟ್ನಲ್ಲಿ ಭಾರೀ ಸ್ಫೋಟ; ಓರ್ವನಿಗೆ ಗಾಯ
ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನ ವಸುಂಧರಾ ಪೊಲೀಸ್ ಔಟ್ಪೋಸ್ಟ್ನಲ್ಲಿ ಶುಕ್ರವಾರ ತಡರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಇಂದಿರಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಿಂದ ಔಟ್ಪೋಸ್ಟ್ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಹವಾನಿಯಂತ್ರಣ ಘಟಕಗಳಿಗೂ ಹಾನಿಯಾಗಿದೆ.
ಸ್ಫೋಟದ ಶಬ್ದ ದೂರದ ಪ್ರದೇಶಗಳಿಗೂ ಕೇಳಿಬಂದಿದೆ ಎಂದು ವರದಿಯಾಗಿದೆ. ಘಟನೆ ಸಂಭವಿಸಿದ ಸಂದರ್ಭದಲ್ಲಿ ಪೊಲೀಸ್ ಔಟ್ಪೋಸ್ಟ್ನಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ.

ಸ್ಫೋಟದಿಂದ 20 ವರ್ಷದ ಆಹಾರ ವಿತರಣಾ ಸಿಬ್ಬಂದಿ ವಿಶಾಲ್ ಗಾಯಗೊಂಡಿದ್ದಾರೆ. ವಿತರಣೆಗೆ ತೆರಳಿದ್ದ ವೇಳೆ ಸ್ಫೋಟದ ಪರಿಣಾಮವಾಗಿ ಹಾರಿದ ಗಾಜಿನ ಚೂರುಗಳು ತಗುಲಿ ಗಾಯಗೊಂಡ ಅವರನ್ನು ದೆಹಲಿಯ ಸೂರ್ಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಪೊಲೀಸರು ಹಾಗೂ ತನಿಖಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದವು. ಸ್ಫೋಟದ ನಿಖರ ಕಾರಣ ಪತ್ತೆಹಚ್ಚಲು ವಿಧಿವಿಜ್ಞಾನ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.