ಡಿಜಿಟಲ್ ಜೀವ ಪ್ರಮಾಣಪತ್ರ ಸಲ್ಲಿಕೆಯಲ್ಲಿ ದಾಖಲೆ: 20.48 ಲಕ್ಷ ರಕ್ಷಣಾ ಪಿಂಚಣಿದಾರರ ನೋಂದಣಿ
ನವದೆಹಲಿ: ರಾಷ್ಟ್ರವ್ಯಾಪಿ ಡಿಜಿಟಲ್ ಜೀವ ಪ್ರಮಾಣಪತ್ರ ಅಭಿಯಾನ 5.0 ಅಡಿಯಲ್ಲಿ 20.48 ಲಕ್ಷಕ್ಕೂ ಹೆಚ್ಚು ರಕ್ಷಣಾ ಪಿಂಚಣಿದಾರರು ಡಿಜಿಟಲ್ ಜೀವ ಪ್ರಮಾಣಪತ್ರ (DLC) ಸಲ್ಲಿಸಿದ್ದಾರೆ. ನವೆಂಬರ್ 11ರ ವೇಳೆಗೆ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ರಕ್ಷಣಾ ಖಾತೆಗಳ ಇಲಾಖೆ ಅತ್ಯಧಿಕ ಪಾಲ್ಗೊಳ್ಳುವಿಕೆ ದಾಖಲಿಸಿದೆ.
ರಕ್ಷಣಾ ಮತ್ತು ಕುಟುಂಬ ಪಿಂಚಣಿದಾರರ ವಾರ್ಷಿಕ ಪರಿಶೀಲನೆ ಸರಳಗೊಳಿಸುವ ಉದ್ದೇಶದಿಂದ ನವೆಂಬರ್ 1ರಿಂದ 30ರವರೆಗೆ ಒಂದು ತಿಂಗಳ ಅಭಿಯಾನ ನಡೆಯುತ್ತಿದೆ.
ಪ್ರಮಾಣಪತ್ರ ಸಲ್ಲಿಕೆಗೆ 194 ಸ್ಪರ್ಶ್ ಸೇವಾ ಕೇಂದ್ರಗಳು, 4.63 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು, 13 ಪಾಲುದಾರ ಬ್ಯಾಂಕ್ಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ 29 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ದೇಶಾದ್ಯಂತ ಸುಮಾರು 80 ಜಾಗೃತಿ ಮತ್ತು ನೆರವು ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಜೀವನ ಪ್ರಮಾಣ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಮೂಲಕ ಆಧಾರ್ ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆ ಪ್ರಮುಖ ಆಕರ್ಷಣೆಯಾಗಿದೆ. ಶೇ.80ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ಫೇಸ್ ಐಡಿ ಮೂಲಕ ಸಲ್ಲಿಸಲಾಗಿದ್ದು, ಬ್ಯಾಂಕ್ ಅಥವಾ ರಕ್ಷಣಾ ಕಚೇರಿಗಳಿಗೆ ತೆರಳದೆ ಸ್ಮಾರ್ಟ್ಫೋನ್ನಲ್ಲೇ ಪರಿಶೀಲನೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ವೃದ್ಧರು ಹಾಗೂ ವಿಕಲಚೇತನ ಪಿಂಚಣಿದಾರರಿಗೆ ಈ ವ್ಯವಸ್ಥೆ ಹೆಚ್ಚು ಅನುಕೂಲಕರವಾಗಿದೆ. ನವೆಂಬರ್ 23ರಂದು ಕೊಚ್ಚಿಯಲ್ಲಿ ಬೃಹತ್ ಡಿಜಿಟಲ್ ಜೀವ ಪ್ರಮಾಣಪತ್ರ ಶಿಬಿರ ನಡೆಯಲಿದೆ.
2025ರ ಅಭಿಯಾನದಲ್ಲಿ 20.94 ಲಕ್ಷಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ಸಲ್ಲಿಸಲಾಗಿತ್ತು. ಈ ಬಾರಿಯೂ ಪಿಂಚಣಿದಾರರು ನಿಗದಿತ ಅವಧಿಯಲ್ಲಿ ವಾರ್ಷಿಕ ಪರಿಶೀಲನೆ ಪೂರ್ಣಗೊಳಿಸುವಂತೆ ಇಲಾಖೆ ಮನವಿ ಮಾಡಿದೆ.