ಮೇಕೆದಾಟು ಯೋಜನೆಗೆ ಕರ್ನಾಟಕದ ಪರ ಒಗ್ಗಟ್ಟಿನ ನಿಲುವು ಅಗತ್ಯ: ಪಕ್ಷಭೇದ ಮರೆತು ಬೆಂಬಲಿಸುವಂತೆ ಪ್ರತಿಪಕ್ಷಗಳಿಗೆ ಸಿಎಂ ಮನವಿ
ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಗಾಗಿ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಸುಪ್ರೀಂ ಕೋರ್ಟ್ನ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ತನ್ನ ವ್ಯಾಪ್ತಿಯಲ್ಲಿ ಅಣೆಕಟ್ಟು ನಿರ್ಮಿಸಲು ಅವಕಾಶವಿದೆ. ತಮಿಳುನಾಡಿಗೆ 177 ಟಿಎಂಸಿ ನೀರು ಬಿಡುಗಡೆ ಮಾಡುವ ಷರತ್ತನ್ನು ರಾಜ್ಯ ಪಾಲಿಸಲಿದೆ ಎಂದು ತಿಳಿಸಿದ್ದಾರೆ.
ಮೇಕೆದಾಟು ಜಲಾಶಯವು ಸಮತೋಲನ ಜಲಾಶಯವಾಗಿದ್ದು, ಇದರಿಂದ ತಮಿಳುನಾಡಿಗೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದ ಪರಿಸರ ಅನುಮತಿಗಳಿಗಾಗಿ ಪರ್ಯಾಯ ಪ್ರದೇಶಗಳಲ್ಲಿ ಸುಮಾರು 5,400 ಹೆಕ್ಟೇರ್ ಅರಣ್ಯ ಭೂಮಿಯನ್ನು ಗುರುತಿಸಲಾಗಿದೆ. ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಪಕ್ಷಭೇದ ಮರೆತು ಬಿಜೆಪಿ ಮತ್ತು ಎನ್ಡಿಎ ನಾಯಕರು ಕರ್ನಾಟಕದ ಪರ ನಿಲ್ಲಬೇಕು ಎಂದು ಮನವಿ ಮಾಡಿದ ಅವರು, ಯೋಜನೆ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ತಂಡವೊಂದನ್ನು ಕರ್ನಾಟಕಕ್ಕೆ ಕಳುಹಿಸಿಕೊಡಲಿ ಎಂದು ಆಹ್ವಾನಿಸಿದ್ದಾರೆ.
ಹೋರಾಟಕ್ಕಿಂತ ಕಾನೂನನ್ನು ಗೌರವಿಸಿ, ಎರಡೂ ರಾಜ್ಯಗಳು ಒಟ್ಟಾಗಿ ನೀರು ಹಂಚಿಕೊಳ್ಳಬೇಕು. ಕಾವೇರಿ ನದಿ ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳದ ಜನರ ಕುಡಿಯುವ ನೀರು, ಕೃಷಿ ಹಾಗೂ ಕೈಗಾರಿಕೆಗಳಿಗೆ ಆಧಾರವಾಗಿದೆ. ಎರಡೂ ರಾಜ್ಯಗಳ ರೈತರ ಹಿತದೃಷ್ಟಿಯಿಂದ ಸಹಕಾರ ಅಗತ್ಯ ಎಂದು ಶಿವಕುಮಾರ್ ಹೇಳಿದ್ದಾರೆ.