ಶಿಕಾರಿಪುರದಲ್ಲಿ ಹೋರಿ ಹಬ್ಬದ ವೇಳೆ ದುರಂತ: ಮೂವರು ಸಾವು
ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ದೀಪಾವಳಿ ನಂತರ ನಡೆಯುವ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬದ ವೇಳೆ ಪ್ರತ್ಯೇಕ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ.
ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಹೋರಿ ಸ್ಪರ್ಧೆಯನ್ನು ಮನೆ ಬಾಗಿಲಲ್ಲಿ ವೀಕ್ಷಿಸುತ್ತಿದ್ದ ಈರಪ್ಪ (84) ಮತ್ತು ಚುರ್ಚುಗುಂಡಿ ಗ್ರಾಮದ ಅರುಣ್ (48) ಅವರಿಗೆ ಓಡುತ್ತಿದ್ದ ಹೋರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.

ಇನ್ನೊಂದು ಘಟನೆಯಲ್ಲಿ, ಕೆರೆಗೆ ಬಿದ್ದ ಹೋರಿಯನ್ನು ರಕ್ಷಿಸಲು ತೆರಳಿದ್ದ ಅಶ್ರಫ್ (22) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬುಧವಾರ ಹಿತ್ತಲ ಗ್ರಾಮದಲ್ಲಿ ನಡೆದ ಹೋರಿ ಹಬ್ಬಕ್ಕೆ ಆಗಮಿಸಿದ್ದ ಅಶ್ರಫ್, ಹೋರಿ ಕೆರೆಗೆ ಬಿದ್ದು ಹೊರಬರಲಾಗದೆ ಒದ್ದಾಡುತ್ತಿದ್ದುದನ್ನು ಕಂಡು ರಕ್ಷಿಸಲು ಮುಂದಾಗಿದ್ದರು. ಈ ಘಟನೆ ಗುರುವಾರ ಹುಣಸೇಕೊಪ್ಪ ಗ್ರಾಮದ ಸಮೀಪ ನಡೆದಿದೆ.