Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಹಾಡಿಗಳ ಸಮಸ್ಯೆ ಪರಿಹಾರಕ್ಕೆ ‘ವಿಶೇಷ ಪ್ರಜಾಸೇವೆ ಅಭಿಯಾನ’: ಸಚಿವ ರಘುಮೂರ್ತಿ

By ANU News
October 10, 2026 2 Min Read
0

ಚಾಮರಾಜನಗರ: ಯಳಂದೂರು ತಾಲೂಕು ಹಾಗೂ ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತಲಿನ ಹಾಡಿಗಳಲ್ಲಿ ವಾಸಿಸುವ ಆದಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲು ‘ವಿಶೇಷ ಪ್ರಜಾಸೇವೆ ಅಭಿಯಾನ’ ಹಮ್ಮಿಕೊಳ್ಳಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ತಿಳಿಸಿದ್ದಾರೆ.

ಬಿಳಿಗಿರಿರಂಗನ ಬೆಟ್ಟದ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ದರ್ಶನ ಪಡೆದ ಬಳಿಕ, ಸಮೀಪದ ಹಾಡಿಗಳಿಗೆ ತೆರಳಿ ಆದಿವಾಸಿಗಳ ಅಹವಾಲು ಆಲಿಸಿದ ಅವರು, ಸರ್ಕಾರವೇ ಜನರ ಮನೆಬಾಗಿಲಿಗೆ ತೆರಳಿ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಅಭಿಯಾನ ರೂಪಿಸಲಾಗುವುದು ಎಂದರು.

ಬಂಗ್ಲೆಪೋಡು, ಹಸಪೋಡು ಹಾಗೂ ಎರಕಲಗದ್ದೆ ಪೋಡು ಕಾಲೊನಿಗಳಿಗೆ ಭೇಟಿ ನೀಡಿದ ಸಚಿವರು, ಮನೆ, ವಿದ್ಯುತ್‌, ಕುಡಿಯುವ ನೀರು, ಆಹಾರ ಕಿಟ್‌ ವಿತರಣೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಜನರಿಂದ ಮಾಹಿತಿ ಪಡೆದರು.

ಹಾಡಿಗಳಲ್ಲಿ 40ರಿಂದ 50 ವರ್ಷಗಳ ಹಿಂದೆ ನಿರ್ಮಿಸಿಕೊಟ್ಟಿರುವ ಹಲವು ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಈ ಕುರಿತು ಸಮೀಕ್ಷೆ ನಡೆಯುತ್ತಿದ್ದು, ಅರ್ಹ ಫಲಾನುಭವಿಗಳಿಗೆ ‘ಸಿಎಂ ಆದಿವಾಸಿ ಗೃಹ ಭಾಗ್ಯ’ ಯೋಜನೆಯಡಿ ಮನೆ ನಿರ್ಮಿಸಿಕೊಡಲು ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಘುಮೂರ್ತಿ ಹೇಳಿದರು.

ಬಿಳಿಗಿರಿರಂಗನ ಬೆಟ್ಟದ ಮುಖ್ಯ ರಸ್ತೆಯಿಂದ ಮಂಜುಗುಡಿ ಪೋಡು ಹಾಗೂ ಕಲ್ಯಾಣಿ ಪೋಡುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚಿಸಿದರು. ಈ ಎರಡು ಹಾಡಿಗಳಲ್ಲಿ ವಿದ್ಯುತ್‌ ಸಂಪರ್ಕದ ಸಮಸ್ಯೆ ಇರುವುದನ್ನು ಗಮನಿಸಿ, ಚೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಹಾಡಿಗಳ ನಿವಾಸಿಗಳು ಆಹಾರ ಕಿಟ್‌ಗಳು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದ್ದು, ನಾಲ್ಕೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ, ಬಾಕಿ ಇರುವ ಆಹಾರ ಕಿಟ್‌ಗಳ ಸಹಿತ ವಿತರಣೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಹಕ್ಕುಪತ್ರ ಹಾಗೂ ಆದಾಯ ಪ್ರಮಾಣಪತ್ರ ಸೇರಿದಂತೆ ಸರ್ಕಾರದಿಂದ ದೊರೆಯಬೇಕಾದ ದಾಖಲೆಗಳನ್ನು ಫಲಾನುಭವಿಗಳ ಮನೆಬಾಗಿಲಿಗೆ ತೆರಳಿ ಒದಗಿಸುವಂತೆ ತಹಶೀಲ್ದಾರ್‌ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಹಾಡಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಎದುರಾಗಿರುವ ತೊಡಕುಗಳನ್ನು ನಿವಾರಿಸಲು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿದರು. ಜಲ ಜೀವನ್‌ ಮಿಷನ್‌ ಅಡಿಯಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ತಕ್ಷಣಕ್ಕೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಸೂಚಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಇರುವ ಕೂಲಿ ಪಾವತಿಗೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾಡಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ‘ಅಡವಿ’ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಶೀಗೆಕಾಯಿ, ನೆಲ್ಲಿಕಾಯಿ ಪುಡಿ, ನೇರಳೆ ಹಣ್ಣಿನ ಸ್ಕ್ವಾಷ್‌ ಸೇರಿದಂತೆ ವಿವಿಧ ಉತ್ಪನ್ನಗಳನ್ನು ವೀಕ್ಷಿಸಿ ಗುಣಮಟ್ಟದ ಕುರಿತು ಮಾಹಿತಿ ಪಡೆದರು.

ಕೊಳ್ಳೇಗಾಲದ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಆಶ್ರಮ ಶಾಲೆಗಳ ಶಿಕ್ಷಕರನ್ನು ಭೇಟಿ ಮಾಡಿದ ಅವರು, ಆದಿವಾಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದರು. ಬಳಿಕ ಕೊಣನಕೆರೆ ಆಶ್ರಮ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳು ಉತ್ತಮ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲರಾಗಲು ಪೋಷಕರು ಸಹಕರಿಸಬೇಕು. ದುಶ್ಚಟಗಳಿಂದ ದೂರವಿದ್ದು, ಮಕ್ಕಳನ್ನು ಸಜ್ಜನರನ್ನಾಗಿ ರೂಪಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಆದಿವಾಸಿ ಅಭಿವೃದ್ಧಿ ನಿಗಮ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಸಚಿವರು ತಿಳಿಸಿದರು.

ಸಚಿವರ ಕ್ರಮಕ್ಕೆ ಜನರ ಮೆಚ್ಚುಗೆ

ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದ ಸಚಿವರು, ಕೆಲವು ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಂಡಿದ್ದಕ್ಕೆ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮೊದಲ ಬಾರಿಗೆ ತಮ್ಮ ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದಾರೆ. ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರದ ಭರವಸೆ ದೊರೆತಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಅಶೋಕ್‌ ಡಿ.ಆರ್‌., ಜಂಟಿ ನಿರ್ದೇಶಕ ಕೆ.ಆರ್‌. ರಾಜಕುಮಾರ್‌, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಎಚ್‌. ಷಡಕ್ಷರಯ್ಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್‌.ಎಸ್‌. ಬಿಂದ್ಯಾ, ಆದಿವಾಸಿ ಮುಖಂಡರಾದ ಮಾದೇಗೌಡ, ಬೊಮ್ಮಯ್ಯ, ಮಾರಮ್ಮ, ಬಸವರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

RSS ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭೇಟಿ ಮಾಡಿದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಪತ್ನಿ ಅಕೀ ಅಬೆ

Next

Housing, roads and power: Minister Raghumurthy reviews issues in tribal settlements

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Housing, roads and power: Minister Raghumurthy reviews issues in tribal settlements
    • ಹಾಡಿಗಳ ಸಮಸ್ಯೆ ಪರಿಹಾರಕ್ಕೆ ‘ವಿಶೇಷ ಪ್ರಜಾಸೇವೆ ಅಭಿಯಾನ’: ಸಚಿವ ರಘುಮೂರ್ತಿ
    • RSS ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭೇಟಿ ಮಾಡಿದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಪತ್ನಿ ಅಕೀ ಅಬೆ
    • India-Japan cultural ties discussed at Akie Abe’s meeting with RSS leadership
    • ಅಪಾರ್ಟ್‌ಮೆಂಟ್‌ಗಳ ಭದ್ರತೆ, ಡ್ರಗ್ಸ್ ವಿರುದ್ಧ ಜಾಗೃತಿ, ರಾತ್ರಿ ಬಿಗಿ ಗಸ್ತು ಬಿಗಿ.. ಬೆಂಗಳೂರು ಈಶಾನ್ಯದಲ್ಲಿ ಅಪರಾಧ ನಿಯಂತ್ರಣಕ್ಕೆ ‘ಮಿಥುನ್ ಸೂತ್ರ’
    Copyright 2026 — ANU News. All rights reserved. Blogsy WordPress Theme