RSS ಹಿಂದೂ ಧರ್ಮಕ್ಕೆ ಸೀಮಿತವೇ? ಸಂಘವು ವಿಜಯದಶಮಿಯನ್ನು ಪ್ರಮುಖ ಉತ್ಸವನ್ನಾಗಿ ಯಾಕೆ ಆಚರಿಸುತ್ತದೆ ಗೊತ್ತಾ?
ಜಯ ಪ್ರಕಾಶ
ಸಾಂಸ್ಕೃತಿಕವಾಗಿ ವೈದಿಕ ಆಚರಣೆಯಷ್ಟೇ ಅಲ್ಲ, ಭೌಗೋಳಿಕವಾಗಿಯೂ ಭಾರತೀಯರು ಹಿಂದೂಗಳಾಗಿ ಕರೆಸಿಕೊಳ್ಳುತ್ತಾರೆ. ಸಿಂಧೂ ತೀರದ ದೇಶವನ್ನು ಹಿಂದೂಸ್ಥಾನ ಎಂದೇ ಕರೆಯಲಾಗುತ್ತದೆ. ಆದರೆ, ಪ್ರಾಂತ, ಭಾಷೆ, ಆಚರಣೆಗಳು ಭಿನ್ನ-ಭಿನ್ನವಾಗಿರುವುದರಿಂದ ಒಗ್ಗಟ್ಟು ಇಲ್ಲದೆ ದೇಶವು ಪರಕೀಯರ ಕಪಿಮುಷ್ಠಿಯಲ್ಲಿ ಸಿಲುಕುತ್ತ್ತಲೇ ಇವೆ.
ಸ್ವಾತಂತ್ರ್ಯ ಪೂರ್ವದ ಆ ಸಂಧಿ ಕಾಲದಲ್ಲಿ ರಾಷ್ಟ್ರೀಯತೆಯ ಮಂತ್ರ ಪಠಿಸುತ್ತಾ, ಧಾರ್ಮ-ಜಾತಿ-ಪಂಥ ಬೇಧವಿಲ್ಲದೆ ಎಲ್ಲಾ ಸಮುದಾಯಗಳ ಜನರನ್ನು ಒಗ್ಗೂಡಿಸುವ ಸಮಾಜ ಪರಿವರ್ತನೆಯ ಪರಿಕಲ್ಪನೆಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅಸ್ತಿತ್ವಕ್ಕೆ ಬಂತು. ವಿಜಯದಶಮಿಯಂದೇ ಈ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದರಿಂದ ಈ ದಿನವನ್ನು ರಾಷ್ಟ್ರಭಕ್ತಿಯ ಉತ್ಸವವಾಗಿ ಆಚರಿಸಲಾಗುತ್ತಿದೆ.
RSS ಹಿಂದೂ ಧರ್ಮಕ್ಕೆ ಸೀಮಿತವೇ?
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹಿಂದೂ ಧರ್ಮಕ್ಕೆ ಸೀಮಿತ ಎಂದು ರಾಜಕೀಯ ವ್ಯಕ್ತಿಗಳು ಧೂಷಿಸುವುದುಂಟು. ಆದರೆ, ಸಂಘದ ಒಳಹೊಕ್ಕು ನೋಡಿದರೆ ಸಂಘ ಒಂದು ವಿಶಿಷ್ಟ ಪ್ರಪಂಚ. ಈ ಪ್ರಪಂಚದಲ್ಲಿ ಆಸ್ತಿಕರೂ ಇದ್ದಾರೆ, ನಾಸ್ತಿಕರೂ ಇರುತ್ತಾರೆ, ಹಿಂದೂ-ಮುಸ್ಲಿಂ-ಕ್ರೈಸ್ತರಾದಿಯಾಗಿ ಎಲ್ಲಾ ಧರ್ಮೀಯರೂ ಇದ್ದಾರೆ. ತಮ್ಮ ಧಾರ್ಮಿಕ ಆಚರಣೆ ಏನೇ ಇದ್ದರೂ ರಾಷ್ಟ್ರೀಯ ಐಕ್ಯತೆಯೇ ಸಂಘದ ಸ್ವಯಂಸೇವಕರಿಗೆ ಮೂಲ ಮಂತ್ರ. ಸ್ವಯಂಸೇವಕರಿಗೆ ದೇವರಿಗಿಂತ ರಾಷ್ಟ್ರವೇ ಮೊದಲು. ಹಾಗಾಗಿಯೇ ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಪ್ರಾರ್ಥನೆಯನ್ನೇ ಕಾರ್ಯಕರ್ತರು ಉಸಿರಾಗಿಸಿದ್ದಾರೆ. ವಿಜಯದಶಮಿಯನ್ನು ನವರಾತ್ರಿಯ ಹಬ್ಬ ಎಂದಷ್ಟೇ ಪರಿಗಣಿಸದೆ, ರಾಷ್ಟ್ರೀಯ ವಿಜಯ ಸಂಕಲ್ಪ ದಿನವಾಗಿ ಆಚರಿಸುತ್ತಾರೆ.

ಸೇವಾ ಕಾರ್ಯಗಳ ಮೂಲಕ ಸಂಘಟನೆಯ ವಿಸ್ತರಣೆ
ನಾಗಪುರದಲ್ಲಿ ಆರಂಭವಾದ ಆರ್ಎಸ್ಎಸ್ ಇಂದು ದೇಶದ ವಿವಿಧ ಭಾಗಗಳಲ್ಲಿ ಶಾಖೆಗಳು ಮತ್ತು ಅಂಗಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ದೇಶ ವಿಭಜನೆಯ ಸಂದರ್ಭದ ಪರಿಹಾರ ಕಾರ್ಯಗಳು, ಗೋವಾ ವಿಮೋಚನಾ ಚಳವಳಿ ಹಾಗೂ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ಚಟುವಟಿಕೆಗಳನ್ನು ಸಂಘದ ಬೆಂಬಲಿಗರು ಅದರ ರಾಷ್ಟ್ರಸೇವೆಯ ಕುರುಹಾಗಿ ಉಲ್ಲೇಖಿಸುತ್ತಾರೆ.
ಡಾಕ್ಟರ್ಜೀ (ಡಾ. ಕೇಶವ ಬಲಿರಾಮ್ ಹೆಡ್ಗೆವಾರ್) ಅವರ ಆಶಯದಂತೆ ವ್ಯಕ್ತಿ ನಿರ್ಮಾಣದ ಮೂಲಕ ಸಮಾಜವನ್ನು ಸಂಘಟಿಸುವುದು ಸಂಘದ ಕಾರ್ಯಪದ್ಧತಿಯ ಪ್ರಮುಖ ಭಾಗವಾಗಿದೆ. ಶಿಕ್ಷಣ, ಸಾಮಾಜಿಕ ಸೇವೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಘದೊಂದಿಗೆ ಸಂಪರ್ಕ ಹೊಂದಿರುವ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.
ಸಮಾಜವನ್ನು ಸಂಘಟಿಸಲು ಮತ್ತು ನಾಗರಿಕರಲ್ಲಿ ಚಾರಿತ್ರ್ಯ ನಿರ್ಮಾಣ ಹಾಗೂ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸಲು ಹೆಡ್ಗೆವಾರ್ ಕೈಗೊಂಡ ಸಂಕಲ್ಪದ ಫಲವಾಗಿ, ಇಂದು ಕೋಟ್ಯಂತರ ಸ್ವಯಂಸೇವಕರು ವಿವಿಧ ಕ್ಷೇತ್ರಗಳಲ್ಲಿ ದೇಶವನ್ನು ಬಲಪಡಿಸುತ್ತಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳೋದು ಹೀಗೆ;
ಭಾರತ ಮಾತೆಯ ಪರಮ ವೈಭವಕ್ಕಾಗಿ ಸಮರ್ಪಿತವಾದ, ರಾಷ್ಟ್ರವನ್ನು ದೇವತೆಯೆಂದು, ಸಮಾಜವನ್ನು ಕುಟುಂಬವೆಂದು ಮತ್ತು ಸೇವೆಯನ್ನು ಆರಾಧನೆಯೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪರಿಗಣಿಸುತ್ತಿದೆ. ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಸಂಘಟನೆಯಾದ ಆರ್ಎಸ್ಎಸ್ನ ಸ್ಥಾಪನಾ ದಿನವು ಸಂಘದ ಸ್ವಯಂಸೇವಕರಿಗೆ ವಿಶೇಷ ದಿನವಾಗಿದೆ.
ವ್ಯಕ್ತಿಯಿಂದ ಸಮಾಜಕ್ಕೆ ಮತ್ತು ಸಮಾಜದಿಂದ ರಾಷ್ಟ್ರಕ್ಕೆ ‘ಇದಂ ರಾಷ್ಟ್ರಾಯ ಇದಂ ನ ಮಮ’ (ಇದು ರಾಷ್ಟ್ರಕ್ಕಾಗಿ, ಇದು ನನಗಾಗಿ ಅಲ್ಲ) ಎಂಬ ಭಾವನೆಯನ್ನು ಬಿತ್ತುವ ಈ ರಾಷ್ಟ್ರ ಭಕ್ತಿಯು, ಭಾರತ ಮಾತೆಯ ಪರಮ ವೈಭವದತ್ತ ಸಾಗುವ ಒಂದು ಅವಿಚ್ಛಿನ್ನ ಪಯಣವಾಗಿದೆ.