ಮೂರೂವರೆ ವರ್ಷದಲ್ಲಿ ನಾಲ್ಕನೇ ಬಾರಿ ಹಾಲಿನ ದರ ಏರಿಕೆ: “ಕನ್ನಡಿಗರಿಗೆ ದೀಪಾವಳಿ ಉಡುಗೊರೆ” ಎಂದು ಬಿಜೆಪಿ ಟೀಕೆ
ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರ ಮತ್ತೊಮ್ಮೆ ಹೆಚ್ಚಳವಾಗುತ್ತಿರುವುದನ್ನು ವಿರೋಧಿಸಿ ಸಂಸದ ಡಾ.ಕೆ. ಸುಧಾಕರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೂರೂವರೆ ವರ್ಷಗಳಲ್ಲಿ ನಾಲ್ಕನೇ ಬಾರಿ ಹಾಲಿನ ದರ ಏರಿಕೆ ಮಾಡುವ ಮೂಲಕ ಸರ್ಕಾರ ಕನ್ನಡಿಗರಿಗೆ ದೀಪಾವಳಿ ಉಡುಗೊರೆ ನೀಡುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಬೆಳಿಗ್ಗೆ ಕುಡಿಯುವ ಒಂದು ಲೋಟ ಹಾಲಿನಿಂದ ಹಿಡಿದು ಸಂಜೆ ಮನೆಗೆ ಮರಳಲು ಬಳಸುವ ಬಸ್ ಪ್ರಯಾಣದವರೆಗೂ ಎಲ್ಲದಕ್ಕೂ ದರ ಏರಿಕೆಯ ಹೊರೆ ಬೀಳುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಾಲಿನ ದರದಲ್ಲಿ ಆಗಿರುವ ಏರಿಕೆಯನ್ನು ಉಲ್ಲೇಖಿಸಿರುವ ಸುಧಾಕರ್, ಜುಲೈ 2023ರಲ್ಲಿ ಲೀಟರ್‌ಗೆ ₹3, ಜೂನ್ 2024ರಲ್ಲಿ ₹2 ಹಾಗೂ ಮಾರ್ಚ್ 2025ರಲ್ಲಿ ₹4 ಹೆಚ್ಚಳ ಮಾಡಲಾಗಿತ್ತು. ಇದೀಗ ಅಕ್ಟೋಬರ್ 2026ರಲ್ಲಿ ಮತ್ತೆ ₹8 ಏರಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಲಿನ ದರ ಒಟ್ಟು ₹17 ಹೆಚ್ಚಳವಾದಂತಾಗಿದೆ. ಈ ಹಿಂದೆ ₹46ಕ್ಕೆ ಲಭ್ಯವಿದ್ದ ಹಾಲಿನ ದರ ಶೀಘ್ರದಲ್ಲೇ ₹54ಕ್ಕೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರಗಳನ್ನೂ ಹೆಚ್ಚಿಸಲು ಸರ್ಕಾರ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎಂದು ಸುಧಾಕರ್ ಆರೋಪಿಸಿದ್ದಾರೆ.
ಗ್ಯಾರಂಟಿ ಯೋಜನೆಗಳು ಮತ್ತು ಉಚಿತ ಸೌಲಭ್ಯಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇದೀಗ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹಾಕುತ್ತಿದೆ. ಉಚಿತ ಸೌಲಭ್ಯಗಳ ಹೆಸರಿನಲ್ಲಿ ನೀಡಿದ್ದನ್ನು ಬಡ್ಡಿ ಸಮೇತ ವಸೂಲಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಆಡಳಿತ ವೈಫಲ್ಯ ಮತ್ತು ಆರ್ಥಿಕ ಶಿಸ್ತಿನ ಕೊರತೆಯಿಂದಾಗಿ ನಿರಂತರ ಬೆಲೆ ಏರಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಹೊರೆ ಹಾಕುವುದನ್ನು ನಿಲ್ಲಿಸಬೇಕು. ಸಾರ್ವಜನಿಕರಿಗೆ ಹೊರೆಯಾಗುವ ದರ ಏರಿಕೆ ಪ್ರಸ್ತಾವನೆಗಳನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಜನರ ಆಕ್ರೋಶಕ್ಕೆ ಸರ್ಕಾರ ತುತ್ತಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.