Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಅದ್ದೂರಿ ಕನ್ನಡ ರಾಜ್ಯೋತ್ಸವ; ಕನ್ನಡ ಸರ್ಕಾರಿ ಭಾಷೆಯಷ್ಟೇ ಅಲ್ಲ, ಹೃದಯದ ಭಾಷೆಯಾಗಬೇಕು ಎಂದ ಸಿಎಂ

By ANU News
November 1, 2026 2 Min Read
Comments Off on ಅದ್ದೂರಿ ಕನ್ನಡ ರಾಜ್ಯೋತ್ಸವ; ಕನ್ನಡ ಸರ್ಕಾರಿ ಭಾಷೆಯಷ್ಟೇ ಅಲ್ಲ, ಹೃದಯದ ಭಾಷೆಯಾಗಬೇಕು ಎಂದ ಸಿಎಂ

ಬೆಂಗಳೂರು: ಕನ್ನಡ ಭಾಷೆಯನ್ನು ಕಲಿತರೆ ಮಾತ್ರ ಸಾಲದು, ಅದನ್ನು ಪ್ರತಿದಿನದ ಬದುಕಿನಲ್ಲಿ ಬಳಸಬೇಕು. ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಮತ್ತು ಗೌರವ ಬೆಳೆಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಜಾಗತಿಕವಾಗಿ ಕನ್ನಡಿಗರು ಸಾಧಿಸಿರುವ ಹೆಗ್ಗಳಿಕೆಯನ್ನು ಸ್ಮರಿಸಿದರು.

ಕನ್ನಡ ಭಾಷೆಯ ಬಗ್ಗೆ ಮಕ್ಕಳಲ್ಲಿ ಪ್ರೀತಿ ಬೆಳೆಸಬೇಕು. ನಾವು ಭಾಷೆಯನ್ನು ಪ್ರೀತಿಸಿದರೆ ಆ ಭಾಷೆಯೇ ನಮ್ಮನ್ನು ಕಾಪಾಡುತ್ತದೆ. ಭಾಷೆಗಳಿಗೆ ಯಾವುದೇ ಗಡಿಗಳಿಲ್ಲ. ಇದು ಡಿಜಿಟಲ್ ಯುಗವಾಗಿದ್ದು, ವಿಶ್ವದ ಎಲ್ಲ ಭಾಷೆಗಳೂ ಮೊಬೈಲ್‌ಗಳಲ್ಲಿ ಲಭ್ಯವಿವೆ. ಭಾಷೆಗಳ ನಡುವಿನ ಸ್ಪರ್ಧೆಯಲ್ಲಿ ಕನ್ನಡವೂ ಬೆಳಗಬೇಕು. ಅದಕ್ಕಾಗಿ ಮಕ್ಕಳು ಮೊದಲು ಕನ್ನಡ ಕಲಿಯಬೇಕು ಮತ್ತು ದಿನನಿತ್ಯ ಅದನ್ನು ಬಳಸಬೇಕು ಎಂದು ಹೇಳಿದರು.

“ಕನ್ನಡ ಸರ್ಕಾರಿ ಭಾಷೆಯಾಗಬಾರದು, ಹೃದಯದ ಭಾಷೆಯಾಗಬೇಕು. ಭಾಷೆ ಅನ್ನುವುದು ಬದುಕು. ಭಾಷೆ ಇಲ್ಲದ ಬದುಕು ಮೂಕಿ ಚಿತ್ರವಾಗಿಬಿಡುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.

ಜಾಗತಿಕ ಮಟ್ಟದಲ್ಲಿ ಕನ್ನಡಿಗರ ಸಾಧನೆ

ಕನ್ನಡದ ಬೇರುಗಳು ಕರ್ನಾಟಕದಲ್ಲಿದ್ದರೂ ಅದರ ರೆಂಬೆ-ಕೊಂಬೆಗಳು ವಿಶ್ವದಾದ್ಯಂತ ಹರಡಿಕೊಂಡಿವೆ. ಸಾವಿರಾರು ಕನ್ನಡಿಗರು ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ಕಲೆ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ಐಟಿ-ಬಿಟಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕನ್ನಡಿಗರ ಸಾಧನೆ ಅನನ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮಕ್ಕಳು ಜಾಗತಿಕ ಸ್ಪರ್ಧೆಗೆ ಸಜ್ಜಾಗಬೇಕು. ಅದಕ್ಕಾಗಿ ಕನ್ನಡದ ಬೇರುಗಳು ಗಟ್ಟಿಯಾಗಿರಬೇಕು. ಕನ್ನಡ, ನೆಲ, ಜಲ ಮತ್ತು ಸಂಸ್ಕೃತಿಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಈ ಬೇರುಗಳನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕನ್ನಡವೇ ನಮ್ಮ ಉಸಿರು, ಹೆಸರು ಮತ್ತು ಕಸುಬು

“ನಮ್ಮ ಉಸಿರು ಕನ್ನಡ, ನಮ್ಮ ಹೆಸರು ಕನ್ನಡ, ನಮ್ಮ ಕಸುಬು ಕನ್ನಡ. ಕನ್ನಡ ನುಡಿ ಬಹಳ ಚೆಂದ; ಅದರಲ್ಲಿ ಏನೇ ಗೀಚಿದರೂ ಆಗುವುದು ಶ್ರೀಗಂಧ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ” ಎಂದು ಕನ್ನಡದ ಅಭಿಮಾನವನ್ನು ವ್ಯಕ್ತಪಡಿಸಿದರು.

ಕವಿ ದ.ರಾ. ಬೇಂದ್ರೆ ಅವರು ಬಹಳ ಹಿಂದೆಯೇ ಜಗದ ಏಳಿಗೆ ಕರ್ನಾಟಕದಿಂದ ಆಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದರು. ಕನ್ನಡ ಕರ್ನಾಟಕದ ದಿಕ್ಸೂಚಿಯಾಗಿದ್ದು, ಕರ್ನಾಟಕ ಭಾರತದ ಭವಿಷ್ಯವಾಗಿದೆ. ಮಾತೃಭಾಷೆಯ ಮೂಲಕ ಜ್ಞಾನ ಮತ್ತು ಸಂಸ್ಕೃತಿ ಹರಿಯುತ್ತದೆ. ಭಾಷೆ ಸಂಸ್ಕೃತಿ ಹಾಗೂ ಜ್ಞಾನದ ಪ್ರತಿಬಿಂಬವಾಗಿದೆ ಎಂದು ಹೇಳಿದರು.

ಮಾತೃಭಾಷೆಯ ಸೇವೆಯೇ ದೊಡ್ಡ ಧರ್ಮ

ನಾವು ಇತರರ ಮನಸ್ಸುಗಳನ್ನು ಕನ್ನಡದ ಮೂಲಕ ಗೆಲ್ಲಬೇಕು. ದೇಹ ಯಾವುದೇ ದೇಶದಲ್ಲಿದ್ದರೂ ಉಸಿರು ಕನ್ನಡವಾಗಿರಬೇಕು. ನುಡಿ ಉಳಿದರೆ ನಾಡು ಉಳಿಯುತ್ತದೆ, ನಾಡು ಉಳಿದರೆ ನುಡಿ ಉಳಿಯುತ್ತದೆ. ರಾಜ್ಯೋತ್ಸವ ಕೇವಲ ಆಚರಣೆಯಲ್ಲ, ಕನ್ನಡ ತಾಯಿ ಭುವನೇಶ್ವರಿಯ ಸೇವೆ ಹಾಗೂ ಮಾತೃಪೂಜೆಯಾಗಿದೆ. ತಾಯಿನುಡಿಯ ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಗು ಹುಟ್ಟಿದಾಗ ತಾಯಿ ಅದನ್ನು ಪ್ರೀತಿಸುವಂತೆ ನಾವು ನಮ್ಮ ಮಾತೃಭಾಷೆಯನ್ನೂ ಪ್ರೀತಿಸಬೇಕು. ಕನ್ನಡವನ್ನು ಪ್ರೀತಿಸುವುದು ತಾಯಿಯನ್ನು ಪ್ರೀತಿಸಿದಂತೆಯೇ. ಮಾತೃಭಾಷೆಯಲ್ಲಿ ಕಲಿತ ಜ್ಞಾನ ಹೆಚ್ಚು ಗಟ್ಟಿಯಾಗಿರುತ್ತದೆ ಎಂದು ಹೇಳಿದರು.

ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಅದು ಗೋವರ್ಧನಗಿರಿಯಾಗುತ್ತದೆ ಎಂಬ ಕುವೆಂಪು ಅವರ ಮಾತನ್ನು ಸ್ಮರಿಸಿದ ಅವರು, ಕನ್ನಡದಲ್ಲಿ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ನಾಡಿನಲ್ಲಿ ಇಂದು ಕನ್ನಡತನ ಜಾಗತಿಕ ಮಟ್ಟದಲ್ಲಿ ಬೆಳಗುತ್ತಿದೆ ಎಂದು ಹೆಮ್ಮೆಯಿಂದ ನುಡಿದರು.

Author

ANU News

Follow Me
Other Articles
Previous

ಕರ್ನಾಟಕದ ವಿವಿಧ ಇಲಾಖೆಗಳ 218 ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಕೆಇಎ ಅಧಿಸೂಚನೆ

Next

Kannada Must Be Language of the Heart, Not Just Official Language: CM D K Shivakumar

Recent Posts

  • NCP Factional Tensions Surface After Amit Shah Meeting; Sunetra Pawar Calls Key MLA Meet
  • ಎನ್‌ಸಿಪಿಯಲ್ಲಿ ಭಿನ್ನಮತ ಸ್ಫೋಟ? ಅಮಿತ್ ಶಾ ಭೇಟಿಯ ಬೆನ್ನಲ್ಲೇ ಸುನೇತ್ರಾ ಪವಾರ್ ತುರ್ತು ಸಭೆ
  • Netanyahu Pushes Trump For Fresh Iran Strikes As Diplomatic Talks Continue
  • ಇರಾನ್‌ನ ಕೇಶ್ಮ್ ದ್ವೀಪದ ಮೇಲೆ ಅಮೆರಿಕ ವೈಮಾನಿಕ ದಾಳಿ: ಮತ್ತೆ ಯುದ್ಧದ ಆತಂಕ!
  • Andhra Coast On Alert As Cyclone Murasu Crosses Coast Near Ongole; Flooding Risk In Low-Lying Areas
Copyright 2026 — ANU News. All rights reserved. Blogsy WordPress Theme