ಡಿಸೆಂಬರ್ 11ರಿಂದ ಖೇಲೋ ಇಂಡಿಯಾ ಯೂತ್ ಗೇಮ್ಸ್: ಲೋಗೋ , ಮ್ಯಾಸ್ಕಾಟ್ ಅನಾವರಣ
ಹೈದರಾಬಾದ್: ಎಂಟನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ಡಿಸೆಂಬರ್ 11ರಿಂದ 22ರವರೆಗೆ ತೆಲಂಗಾಣದಲ್ಲಿ ನಡೆಯಲಿದೆ. ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಭಾನುವಾರ ಕ್ರೀಡಾಕೂಟದ ಲೋಗೋ ಹಾಗೂ ಮ್ಯಾಸ್ಕಾಟ್ ಅನಾವರಣಗೊಳಿಸಲಿದ್ದಾರೆ.
ಸುಮಾರು 8,000 ಕ್ರೀಡಾಪಟುಗಳು ಮತ್ತು ಭಾಗವಹಿಸುವವರು 27 ಸ್ಪರ್ಧಾತ್ಮಕ ಕ್ರೀಡೆಗಳು ಹಾಗೂ ಎರಡು ಪ್ರದರ್ಶನ ಕ್ರೀಡೆಗಳು ಸೇರಿದಂತೆ ಒಟ್ಟು 29 ವಿಭಾಗಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೈದರಾಬಾದ್, ಖಮ್ಮಮ್, ಕರೀಮ್‌ನಗರ, ಹನುಮಕೊಂಡ, ಮಹಬೂಬ್‌ನಗರ ಮತ್ತು ನಿಜಾಮಾಬಾದ್ ಸೇರಿದಂತೆ ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಈ ಬಾರಿ ಸಾಫ್ಟ್‌ಬಾಲ್ ಸ್ಪರ್ಧಾತ್ಮಕ ಕ್ರೀಡೆಯಾಗಿ ಮೊದಲ ಬಾರಿಗೆ ಸೇರ್ಪಡೆಯಾಗಿದೆ. ಸೇಲಿಂಗ್ ಮತ್ತು ಕರ್ರ ಸಮುಗಳನ್ನು ಪ್ರದರ್ಶನ ಕ್ರೀಡೆಗಳಾಗಿ ಪರಿಚಯಿಸಲಾಗುತ್ತಿದೆ.
ಕ್ರೀಡಾಕೂಟವು ದೇಶದ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸಲಿದೆ ಎಂದು ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಯುವಜನರು ಮಾದಕ ವ್ಯಸನದಿಂದ ದೂರವಿದ್ದು, ಮಾದಕ ದ್ರವ್ಯ ಮುಕ್ತ ಭಾರತದ ನಿರ್ಮಾಣಕ್ಕೆ ಕೈಜೋಡಿಸಲು ಈ ಕ್ರೀಡಾಕೂಟ ನೆರವಾಗಲಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
‘ನೀಲಮಣಿ’ ಮ್ಯಾಸ್ಕಾಟ್ ಶಕ್ತಿ, ಚುರುಕುತನ, ಧೈರ್ಯ ಮತ್ತು ದೃಢಸಂಕಲ್ಪವನ್ನು ಸಂಕೇತಿಸುತ್ತದೆ. ಲೋಗೋದಲ್ಲಿ ಕಾಕತೀಯ ಕಲಾ ತೋರಣಂ, ಹುಸೇನ್ ಸಾಗರ್‌ನ ಬುದ್ಧನ ಪ್ರತಿಮೆ ಹಾಗೂ ತಂಗೇಡು ಹೂವಿನ ಚಿತ್ರಣವಿದೆ.