ರೈಲಿನಲ್ಲಿ ಗುಂಪು ಪ್ರಯಾಣಿಸುವವರಿಗೆ ಗುಡ್‌ನ್ಯೂಸ್; ಗ್ರೂಪ್ ಬುಕಿಂಗ್ ನಿಯಮ ಸರಳೀಕರಣ
ಬೆಂಗಳೂರು: ಮದುವೆ, ಪ್ರವಾಸ, ಕ್ರೀಡಾಕೂಟ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಗುಂಪಾಗಿ ರೈಲಿನಲ್ಲಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಗ್ರೂಪ್ ಅಥವಾ ಬಲ್ಕ್ ಟಿಕೆಟ್ ಬುಕಿಂಗ್ ನಿಯಮಗಳನ್ನು ಸರಳಗೊಳಿಸಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮೂಲಕ ಹಿಂದಿನ ಎಲ್ಲ ಮಾರ್ಗಸೂಚಿಗಳನ್ನು ರದ್ದುಗೊಳಿಸಲಾಗಿದೆ.
ಯಾರಿಗೆ ಅನ್ವಯವಾಗಲಿದೆ ಹೊಸ ನಿಯಮ?
ಮದುವೆ ಸಮಾರಂಭಗಳಿಗೆ ತೆರಳುವವರು, ವಿದ್ಯಾರ್ಥಿಗಳು, ಯಾತ್ರಿಕರು, ಕ್ರೀಡಾ ತಂಡಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗುಂಪುಗಳು ಈ ಸೌಲಭ್ಯ ಪಡೆಯಬಹುದು. ನಿರ್ದಿಷ್ಟ ಉದ್ದೇಶಕ್ಕಾಗಿ ಒಟ್ಟಾಗಿ ಪ್ರಯಾಣಿಸುವ ಅಧಿಕೃತ ಗುಂಪುಗಳಿಗೆ ಈ ನಿಯಮ ಅನ್ವಯಿಸುತ್ತದೆ. ದೃಢೀಕೃತ ಟಿಕೆಟ್, ಆರ್‌ಎಸಿ ಹಾಗೂ ಕಾಯುವ ಪಟ್ಟಿಯ ಟಿಕೆಟ್ ಸೇರಿದಂತೆ ಎಲ್ಲ ಪ್ರಯಾಣದ ದರ್ಜೆಗಳಿಗೂ ಇದು ಅನ್ವಯವಾಗಲಿದೆ.

ಬೆಳಗ್ಗೆ 9 ಗಂಟೆಯಿಂದ ಬುಕಿಂಗ್‌ಗೆ ಅವಕಾಶ
ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಆರಂಭವಾದ ಒಂದು ಗಂಟೆಯ ಬಳಿಕ, ಅಂದರೆ ಬೆಳಗ್ಗೆ 9 ಗಂಟೆಯಿಂದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾತ್ರ ಗ್ರೂಪ್ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.
ಬರ್ತ್‌ಗಳ ಗರಿಷ್ಠ ಮಿತಿ ರದ್ದು
ಹೊಸ ಮಾರ್ಗಸೂಚಿಯ ಪ್ರಮುಖ ಬದಲಾವಣೆಯೆಂದರೆ ಗ್ರೂಪ್ ಬುಕಿಂಗ್‌ನಲ್ಲಿ ಕಾಯ್ದಿರಿಸಬಹುದಾದ ಬರ್ತ್‌ಗಳ ಸಂಖ್ಯೆಗೆ ಈ ಹಿಂದೆ ಇದ್ದ ಗರಿಷ್ಠ ಮಿತಿಯನ್ನು ತೆಗೆದುಹಾಕಿರುವುದು. ಈ ಹಿಂದೆ ಜಾರಿಯಲ್ಲಿದ್ದ ಮಿತಿಗಳು ಮತ್ತು ಮಾರ್ಗಸೂಚಿಗಳನ್ನು ಹಿಂಪಡೆಯಲಾಗಿದೆ. ಇದೀಗ ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು (CRS) ಅಥವಾ ನಿಲ್ದಾಣ ವ್ಯವಸ್ಥಾಪಕರು ಗುಂಪು ಕಾಯ್ದಿರಿಸುವಿಕೆಗೆ ಅನುಮತಿ ನೀಡುವ ಅಧಿಕಾರ ಹೊಂದಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ಗ್ರೂಪ್ ಬುಕಿಂಗ್ ಬಯಸುವವರು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬೇಕು. ವಿದೇಶಿ ಪ್ರವಾಸಿಗರು ಅಥವಾ ಅನಿವಾಸಿ ಭಾರತೀಯರ ಕಾಯ್ದಿರಿಸುವಿಕೆಯನ್ನು ಹೊರತುಪಡಿಸಿ, ಇತರ ಯಾವುದೇ ಸಂದರ್ಭದಲ್ಲಿ ಟ್ರಾವೆಲ್ ಏಜೆಂಟ್‌ಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿಯಲ್ಲಿ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಮತ್ತು ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಅಲ್ಲದೆ, ಗುಂಪು ಪ್ರಯಾಣದ ಉದ್ದೇಶವನ್ನೂ ಸ್ಪಷ್ಟವಾಗಿ ತಿಳಿಸಬೇಕು. ಉದ್ದೇಶವನ್ನು ನಮೂದಿಸದ ಅರ್ಜಿಗಳಿಗೆ ಅನುಮತಿ ನೀಡುವುದಿಲ್ಲ.
ಹಿಂದಿರುಗುವ ಪ್ರಯಾಣಕ್ಕೂ ಗ್ರೂಪ್ ಬುಕಿಂಗ್
ಹಿಂದಿರುಗುವ ಪ್ರಯಾಣಕ್ಕೂ ಅದೇ ಬುಕಿಂಗ್ ಕಚೇರಿಯಲ್ಲಿ ಗ್ರೂಪ್ ಬುಕಿಂಗ್‌ಗೆ ಅನುಮತಿ ಪಡೆಯಬಹುದು. ಆದರೆ, ಹಿಂದಿರುಗುವ ಪ್ರಯಾಣವನ್ನು ಪ್ರತ್ಯೇಕ ಪ್ರಯಾಣವೆಂದು ಪರಿಗಣಿಸಲಾಗುತ್ತದೆ. ಹೊಸ ಮಾರ್ಗಸೂಚಿಯಿಂದ ದೊಡ್ಡ ಗುಂಪುಗಳಲ್ಲಿ ರೈಲು ಪ್ರಯಾಣ ಯೋಜಿಸುವವರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.