ಭಾರತ ವಿರುದ್ಧದ ಕ್ರಿಕೆಟ್ ಟೆಸ್ಟ್ ಬಳಿಕ ಹೀದರ್ ನೈಟ್ ನಿವೃತ್ತಿ
ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಹಾಗೂ ವಿಶ್ವಕಪ್ ವಿಜೇತೆ ಹೀದರ್ ನೈಟ್ ಅವರು ಲಾರ್ಡ್ಸ್‌ನಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ.
2010ರಲ್ಲಿ ಇಂಗ್ಲೆಂಡ್ ಪರ ಪದಾರ್ಪಣೆ ಮಾಡಿದ ನೈಟ್, 16 ವರ್ಷಗಳ ವೃತ್ತಿಜೀವನದಲ್ಲಿ 320 ಅಂತರರಾಷ್ಟ್ರೀಯ ಪಂದ್ಯಗಳನ್ನು (15 ಟೆಸ್ಟ್, 160 ಏಕದಿನ, 145 ಟಿ20) ಆಡಿದ್ದು, 7,988 ರನ್ ಹಾಗೂ ಆರು ಶತಕಗಳನ್ನು ದಾಖಲಿಸಿದ್ದಾರೆ. 2020ರಲ್ಲಿ ಮೂರು ಮಾದರಿಗಳಲ್ಲೂ ಶತಕ ಗಳಿಸಿದ ಮೊದಲ ಇಂಗ್ಲೆಂಡ್ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ.
2016ರಿಂದ 2025ರವರೆಗೆ 199 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಅವರು, 134 ಗೆಲುವುಗಳನ್ನು ದಾಖಲಿಸಿದ್ದರು. ಅವರ ನಾಯಕತ್ವದಲ್ಲೇ ಇಂಗ್ಲೆಂಡ್ 2017ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು.

“ಇಂಗ್ಲೆಂಡ್ ಪರ ಆಡಿದ ಪ್ರಯಾಣ ನನ್ನ ಜೀವನದ ಅಮೂಲ್ಯ ಅನುಭವ. ಡ್ರೆಸ್ಸಿಂಗ್ ರೂಮ್, ತಂಡದ ಸಹ ಆಟಗಾರ್ತಿಯರು ಮತ್ತು ಈ ನೆನಪುಗಳು ನನ್ನನ್ನು ರೂಪಿಸಿವೆ. ಈಗ ಈ ನಿರ್ಧಾರದಿಂದ ತೃಪ್ತಿಯಾಗಿದ್ದು, ಜೀವನದ ಮುಂದಿನ ಹಂತದತ್ತ ಎದುರು ನೋಡುತ್ತಿದ್ದೇನೆ” ಎಂದು ನೈಟ್ ತಿಳಿಸಿದ್ದಾರೆ.
ಕಳೆದ ವರ್ಷ ಅವರು ಲಂಡನ್ ಸ್ಪಿರಿಟ್ ಮಹಿಳಾ ತಂಡದ ಜನರಲ್ ಮ್ಯಾನೇಜರ್ ಆಗಿ ನೇಮಕಗೊಂಡಿದ್ದರು. ಭಾರತದ ವಿರುದ್ಧದ ಟೆಸ್ಟ್ ಪಂದ್ಯವು ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಪಂದ್ಯವಾಗಲಿದೆ.