5ನೇ ತರಗತಿವರೆಗೆ ದ್ವಿಭಾಷಾ ನೀತಿಗೆ ವಿರೋಧ; ರಾಜ್ಯಪಾಲರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮನವಿ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ 5ನೇ ತರಗತಿವರೆಗೆ ದ್ವಿಭಾಷಾ (ಬೈಲಿಂಗ್ವಲ್) ಶಿಕ್ಷಣ ನೀತಿ ಜಾರಿಗೊಳಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದ್ದು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಯೋಗವು ಮಂಗಳವಾರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ.
ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗ, ದ್ವಿಭಾಷಾ ನೀತಿಯಿಂದ ಕನ್ನಡ ಭಾಷೆಯನ್ನು ಹಿನ್ನೆಲೆಗೆ ಸರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ, ಸರ್ಕಾರದ ನಿರ್ಧಾರಕ್ಕೆ ಅನುಮತಿ ನೀಡಬಾರದು ಎಂದು ಕೋರಿದೆ.
ಪ್ರಸ್ತುತ ರಾಜ್ಯದಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದ್ದು, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಬೋಧನೆ ಮಾಡಲಾಗುತ್ತಿದೆ. ಹೊಸ ಪ್ರಸ್ತಾವನೆಯಂತೆ 1ರಿಂದ 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಬೋಧನೆಗೆ ಆದ್ಯತೆ ನೀಡಲಾಗಿದ್ದು, ತೃತೀಯ ಭಾಷೆಯನ್ನು ಕೈಬಿಡುವ ಶಿಫಾರಸು ಮಾಡಲಾಗಿದೆ.

ರಾಜ್ಯ ಶಿಕ್ಷಣ ನೀತಿ (SEP) ಆಯೋಗದ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ನೇತೃತ್ವದ ಆಯೋಗವು ಪೂರ್ವ ಪ್ರಾಥಮಿಕದಿಂದ 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆ ಮತ್ತು ಇಂಗ್ಲಿಷ್ ಒಳಗೊಂಡ ದ್ವಿಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕನ್ನಡ ಅಥವಾ ಮಾತೃಭಾಷೆಯಲ್ಲಿ ಬಲವಾದ ಅಡಿಪಾಯ ನಿರ್ಮಾಣದ ಜೊತೆಗೆ ಇಂಗ್ಲಿಷ್ ಕಲಿಕೆಗೆ ಅವಕಾಶ ಕಲ್ಪಿಸುವುದು ಉದ್ದೇಶ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಆದರೆ, ಈ ಶಿಫಾರಸಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವಿರೋಧ ವ್ಯಕ್ತಪಡಿಸಿದ್ದು, ಇದು ಕನ್ನಡದ ಸ್ಥಾನವನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.