Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಕಸರತ್ತು; ಅಧಿಕಾರಿಗಳಿಗೆ ಸಚಿವರ ಖಡಕ್ ಸೂಚನೆ

By ANU News
September 4, 2026 2 Min Read
0

ಬೆಂಗಳೂರು: ಮೇಕೆದಾಟು ಯೋಜನೆಯನ್ನು ಶೀಘ್ರ ಜಾರಿಗೆ ತರುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಯೋಜನೆಯ ಪ್ರಗತಿ ಹಾಗೂ ಭೂಸ್ವಾಧೀನಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಶುಕ್ರವಾರ ಮಹತ್ವದ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಯೋಜನೆಗಾಗಿ ಮುಳುಗಡೆಯಾಗಲಿರುವ ಭೂಮಿಗೆ ಪ್ರತಿಯಾಗಿ ನೀಡಬೇಕಾದ ಪರಿಹಾರ ಭೂಮಿಯನ್ನು ಶೀಘ್ರ ಗುರುತಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು. ಯಾವುದೇ ಕಾರಣಕ್ಕೂ ವಸತಿ ಪ್ರದೇಶಗಳನ್ನು ಪರಿಹಾರ ಭೂಮಿಯ ಪಟ್ಟಿಯಲ್ಲಿ ಸೇರಿಸಬಾರದು. ಡೀಮ್ಡ್ ಅರಣ್ಯ ಪ್ರದೇಶ ಹಾಗೂ ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ಮಾತ್ರ ಗುರುತಿಸುವಂತೆ ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು.

5,096 ಹೆಕ್ಟೇರ್ ಅರಣ್ಯ ಭೂಮಿಗೆ ಪರ್ಯಾಯ ಜಮೀನು

ಮೇಕೆದಾಟು ಯೋಜನೆಯ ಡಿಪಿಆರ್‌ಗೆ ತಾಂತ್ರಿಕ ಅನುಮೋದನೆ ಪಡೆಯುವ ಪ್ರಕ್ರಿಯೆ ಚುರುಕುಗೊಂಡಿದೆ. ಕೇಂದ್ರ ಜಲ ಆಯೋಗದ (CWC) ಮಾಜಿ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿ ಡಿಪಿಆರ್ ಸಿದ್ಧಪಡಿಸಲಾಗಿದೆ.

ಯೋಜನೆಗಾಗಿ ಮುಳುಗಡೆಯಾಗಲಿರುವ 5,096 ಹೆಕ್ಟೇರ್ ಅರಣ್ಯ ಭೂಮಿಗೆ ಪರ್ಯಾಯವಾಗಿ ರಾಜ್ಯ ಸರ್ಕಾರ ಭೂಮಿ ಒದಗಿಸಬೇಕಿದೆ. ಕಂದಾಯ ಇಲಾಖೆ ಈಗಾಗಲೇ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಿದೆ. ಅರಣ್ಯ ಬೆಳೆಸಲು ಅಗತ್ಯವಿರುವ ಸುಮಾರು 5 ಸಾವಿರ ಹೆಕ್ಟೇರ್ ಭೂಮಿಯನ್ನು ತ್ವರಿತವಾಗಿ ಒದಗಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಡೀಮ್ಡ್ ಅರಣ್ಯ ಪ್ರದೇಶ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ 1:2 ಅನುಪಾತದಲ್ಲಿ ಪರಿಹಾರ ಭೂಮಿ ಒದಗಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು. ಮಂಡ್ಯ ಜಿಲ್ಲೆಯೊಂದರಲ್ಲೇ ಲಭ್ಯವಿರುವ ಡೀಮ್ಡ್ ಅರಣ್ಯ ಪ್ರದೇಶದಿಂದ ಪರಿಹಾರ ಭೂಮಿ ಒದಗಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಯಿತು.

ಮಂಡ್ಯ ಜಿಲ್ಲೆಯಿಂದ ಈಗಾಗಲೇ 772 ಹೆಕ್ಟೇರ್ ಭೂಮಿ ಒದಗಿಸಲು ಸಿದ್ಧತೆ ಪೂರ್ಣಗೊಂಡಿದ್ದು, ಉಳಿದ ಭೂಮಿಗಾಗಿ ಡೀಮ್ಡ್ ಅರಣ್ಯ ಪ್ರದೇಶವನ್ನು ಪರಿಗಣಿಸಬೇಕಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.

ಚಿತ್ರದುರ್ಗ, ರಾಯಚೂರು, ದಾವಣಗೆರೆ, ಬಾಗಲಕೋಟೆ, ಯಾದಗಿರಿ, ಹಾವೇರಿ, ಗದಗ, ವಿಜಯನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಜಿಲ್ಲೆಗಳು ಈಗಾಗಲೇ ‘ಸಿ ಮತ್ತು ಡಿ’ ದರ್ಜೆಯ ಜಮೀನುಗಳ ಸರ್ವೆ ನಡೆಸಿ ವರದಿ ಸಲ್ಲಿಸಿವೆ.

10 ದಿನಗಳಲ್ಲಿ ಜಂಟಿ ಸರ್ವೆ ವರದಿ

ಕಂದಾಯ ವ್ಯಾಪ್ತಿಯ ಭೂಮಿ ಪ್ರಕ್ರಿಯೆಗೆ ಮಂಡ್ಯ ಜಿಲ್ಲಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇದೇ ಮಾದರಿಯಲ್ಲಿ ಅರಣ್ಯ ಭೂಮಿ ಪ್ರಕ್ರಿಯೆ ಸುಗಮಗೊಳಿಸಲು ಮತ್ತೊಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸುವಂತೆ ಸಚಿವರು ಸೂಚಿಸಿದರು.

ಮುಳುಗಡೆಯಾಗಲಿರುವ ಭೂಮಿ ಹಾಗೂ ಮರಗಳ ಸರ್ವೆ ಕಾರ್ಯವನ್ನು ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಜಂಟಿಯಾಗಿ ತ್ವರಿತವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಮುಂದಿನ 10 ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಸೆ.7ರಂದು ದೆಹಲಿ ಭೇಟಿ; ಡೀಮ್ಡ್ ಅರಣ್ಯದ ಬಗ್ಗೆ ಸ್ಪಷ್ಟನೆ ನಿರೀಕ್ಷೆ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೆಪ್ಟೆಂಬರ್ 7ರಂದು ದೆಹಲಿಗೆ ಭೇಟಿ ನೀಡಲಿದ್ದು, ಸೆಪ್ಟೆಂಬರ್ 8ರಂದು ಡೀಮ್ಡ್ ಅರಣ್ಯವನ್ನು ಪರಿಹಾರ ಭೂಮಿಯಾಗಿ ಪರಿಗಣಿಸುವ ಕುರಿತು ಸ್ಪಷ್ಟನೆ ದೊರೆಯುವ ನಿರೀಕ್ಷೆಯಿದೆ. ಅನುಮತಿ ದೊರೆತ ತಕ್ಷಣ ಯಾವುದೇ ವಿಳಂಬವಿಲ್ಲದೆ ಭೂಮಿ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

ಹಣಕಾಸಿನ ಅಗತ್ಯವಿದ್ದಲ್ಲಿ ನೀರಾವರಿ ನಿಗಮಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿರುವ ಸಚಿವರು, ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆಯ ನಿಯಮಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗೈರಾದ ಜಿಲ್ಲಾಧಿಕಾರಿಗಳಿಗೆ ನೋಟಿಸ್

ಮೇಕೆದಾಟು ಯೋಜನೆ ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಯೋಜನೆಯ ವಿಚಾರದಲ್ಲಿ ಯಾವುದೇ ಹಂತದಲ್ಲೂ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಸಚಿವರು ಎಚ್ಚರಿಸಿದರು.

ಪೂರ್ವ ಮಾಹಿತಿ ನೀಡದೆ ವಿಡಿಯೋ ಕಾನ್ಫರೆನ್ಸ್‌ಗೆ ಗೈರಾದ ಕೆಲವು ಜಿಲ್ಲಾಧಿಕಾರಿಗಳಿಗೆ ತಕ್ಷಣ ನೋಟಿಸ್ ಜಾರಿ ಮಾಡುವಂತೆ ಸರ್ಕಾರದ ಕಾರ್ಯದರ್ಶಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿಗಳೊಂದಿಗೆ ಬರ ಪರಿಶೀಲನಾ ಕಾರ್ಯಕ್ರಮದ ನಡುವೆಯೂ ಮೇಕೆದಾಟು ಯೋಜನೆಗೆ ಆದ್ಯತೆ ನೀಡಿ ಸಭೆ ನಡೆಸುತ್ತಿರುವುದಾಗಿ ತಿಳಿಸಿದ ಸಚಿವರು, ಅಧಿಕಾರಿಗಳಿಂದಲೂ ಅದೇ ಮಟ್ಟದ ಬದ್ಧತೆ ಹಾಗೂ ಕಾರ್ಯತತ್ಪರತೆಯನ್ನು ನಿರೀಕ್ಷಿಸುವುದಾಗಿ ಹೇಳಿದರು.

ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತ, ಕಠಾರಿಯಾ, ಅಂಜುಮ್ ಪರ್ವೇಜ್, ಸಿಎನ್‌ಎನ್ ಎಂಡಿ ಮಹೇಶ್ ಹಾಗೂ ಮೇಕೆದಾಟು ಯೋಜನೆಯ ನೋಡಲ್ ಅಧಿಕಾರಿ ಡಾ. ಕುಮಾರ್ ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Karnataka steps up crackdown on PoP Ganesh idols; 872 seized across 9 districts

Next

Mekedatu project: Karnataka steps up land process, officials told to fast-track work

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಗೌರಿ-ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯ ಭರ್ಜರಿ ಸಿದ್ಧತೆ; ಬೆಂಗಳೂರಿನಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
    • Gowri-Ganesha festival: KSRTC to operate 2,400 extra buses from Bengaluru
    • Mekedatu project: Karnataka steps up land process, officials told to fast-track work
    • ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಕಸರತ್ತು; ಅಧಿಕಾರಿಗಳಿಗೆ ಸಚಿವರ ಖಡಕ್ ಸೂಚನೆ
    • Karnataka steps up crackdown on PoP Ganesh idols; 872 seized across 9 districts
    Copyright 2026 — ANU News. All rights reserved. Blogsy WordPress Theme