ಬಿಜೆಪಿ ಸರ್ಕಾರದ ಅವಧಿಯಲ್ಲೇ ₹1,281 ಕೋಟಿ ನೀರಾವರಿ ಯೋಜನೆ ಮಂಜೂರು: ಸಿ.ಟಿ. ರವಿ
ಚಿಕ್ಕಮಗಳೂರು: ಭದ್ರಾ ಉಪಜಲಾನಯನ ಪ್ರದೇಶದಿಂದ ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳ 245 ಕೆರೆಗಳಿಗೆ ನೀರು ತುಂಬಿಸುವ ₹1,281 ಕೋಟಿ ವೆಚ್ಚದ ನೀರಾವರಿ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಹೇಳಿದ್ದಾರೆ.
ಬೆಳವಾಡಿ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ನಮಗೆ ಉಪಕಾರ ಮಾಡುವ ಪ್ರತಿಯೊಂದಕ್ಕೂ ಕೃತಜ್ಞತೆ ಸಲ್ಲಿಸುವ ಪರಂಪರೆ ಇದೆ. ಜೀವಜಲದ ಪ್ರತೀಕವಾಗಿರುವ ಗಂಗಾಮಾತೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಬಾಗಿನ ಅರ್ಪಿಸಲಾಗಿದೆ ಎಂದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ರಾಜಕೀಯ ಮಾತನಾಡುವುದಿಲ್ಲ. ಆದರೆ ಸತ್ಯ ಮೌನವಾಗಿದ್ದಾಗ ಸುಳ್ಳು ವಿಜೃಂಭಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಿಮವಾಗಿ ಗೆಲ್ಲುವುದು ಸತ್ಯವೇ. ಸರಿಯಾದ ಸಮಯದಲ್ಲಿ ಸತ್ಯ ಹೊರಬಂದು ತನ್ನ ಸ್ಥಾನ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
245 ಕೆರೆಗಳಿಗೆ ನೀರು
ನೀರಾವರಿ ವಿಚಾರದಲ್ಲಿ ಹಿಂದೆ ಗುರುತ್ವಾಕರ್ಷಣೆಯ ಆಧಾರದ ಮೇಲೆ ಕರಗಡ ಯೋಜನೆಯ ಮೂಲಕ ನೀರು ತರಲು ಪ್ರಯತ್ನಿಸಲಾಗಿತ್ತು. ಅದು ವಿಫಲವಾದ ಬಳಿಕ ಪಂಪ್‌ಗಳು ಹಾಗೂ ಮೋಟರ್‌ಗಳ ಮೂಲಕ ಹಲವು ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ಇದು ಶಾಶ್ವತ ಪರಿಹಾರವಲ್ಲ ಎಂಬ ಕಾರಣಕ್ಕೆ ಭದ್ರಾ ನದಿಯಿಂದ ಶಾಶ್ವತ ನೀರಾವರಿ ಯೋಜನೆ ರೂಪಿಸಲು ಪ್ರಯತ್ನಿಸಲಾಯಿತು ಎಂದು ರವಿ ತಿಳಿಸಿದರು.

ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಯೋಜನೆ ಮಂಜೂರು ಮಾಡುವಂತೆ ಮನವಿ ಮಾಡಿದ್ದೆ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟವಿದ್ದರೂ, ಜನರಿಗೆ ನೀಡಿದ ಮಾತಿನಂತೆ ಯೋಜನೆ ಮುಂದುವರಿಸುವಂತೆ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದರು.
ಇದರ ಫಲವಾಗಿ 2020ರ ನವೆಂಬರ್‌ನಲ್ಲಿ ₹1,281 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ದೊರೆಯಿತು. ಮೊದಲ ಹಂತಕ್ಕೆ ₹406.50 ಕೋಟಿ, ಎರಡನೇ ಹಂತಕ್ಕೆ ₹298.60 ಕೋಟಿ, ಮೂರನೇ ಹಂತಕ್ಕೆ ₹476.70 ಕೋಟಿ ಹಾಗೂ ನಾಲ್ಕನೇ ಹಂತಕ್ಕೆ ₹100 ಕೋಟಿ ಮೀಸಲಾಗಿದೆ. ಮೊದಲ ಎರಡು ಹಂತಗಳು ಪೂರ್ಣಗೊಂಡಿದ್ದು, ಮೂರನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಯೋಜನೆ ಪೂರ್ಣಗೊಂಡ ಬಳಿಕ ಚಿಕ್ಕಮಗಳೂರು ಸೇರಿದಂತೆ ಮೂರು ತಾಲೂಕುಗಳ 245 ಕೆರೆಗಳಿಗೆ ನೀರು ತಲುಪಲಿದೆ. ಯೋಜನೆಯ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಗೌರವ ಸಲ್ಲಬೇಕು. ಇದರ ಶ್ರೇಯಸ್ಸನ್ನು ತಾವು ಒಬ್ಬರೇ ಪಡೆಯಲು ಬಯಸುವುದಿಲ್ಲ ಎಂದು ರವಿ ಹೇಳಿದರು.
ರಣಘಟ್ಟ ಯೋಜನೆಯಲ್ಲೂ ಬೆಳವಾಡಿ ಕೆರೆ
ರಣಘಟ್ಟ ಯೋಜನೆಯ ಆರಂಭಿಕ ಪ್ರಸ್ತಾವನೆಯಲ್ಲಿ ಬೆಳವಾಡಿ ಕೆರೆಯ ಹೆಸರು ಇರಲಿಲ್ಲ. ಈ ವಿಷಯ ಗಮನಕ್ಕೆ ಬಂದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆರೆಯನ್ನು ಯೋಜನೆಗೆ ಸೇರ್ಪಡೆಗೊಳಿಸುವಂತೆ ಕ್ರಮ ಕೈಗೊಳ್ಳಲಾಗಿತ್ತು. ಬಳಿಕ ₹125.46 ಕೋಟಿ ವೆಚ್ಚದ ಆಡಳಿತಾತ್ಮಕ ಅನುಮೋದನೆ ದೊರೆಯುವಂತೆ ಪ್ರಯತ್ನಿಸಲಾಗಿದೆ ಎಂದರು.
ಅಧಿಕಾರಕ್ಕಾಗಿ ಅಲ್ಲ, ಸಿದ್ಧಾಂತಕ್ಕಾಗಿ ರಾಜಕಾರಣ
ತಮಗೆ 20 ವರ್ಷಗಳ ಕಾಲ ಶಾಸಕನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು, ರಸ್ತೆ, ನೀರಾವರಿ, ಅಂಬೇಡ್ಕರ್ ಭವನ, ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಹಲವು ಜನಪರ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ರವಿ ಹೇಳಿದರು.
ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ. ಸಿದ್ಧಾಂತಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇನೆ. ತಮ್ಮ ರಾಜಕೀಯ ಗುರುತು ಬಿಜೆಪಿಯಾಗಿದ್ದು, ಬಿಜೆಪಿಯಲ್ಲೇ ಹುಟ್ಟಿ ಬಿಜೆಪಿಯಲ್ಲೇ ಸಾಯುತ್ತೇನೆ ಎಂಬುದು ತಮ್ಮ ನಿಲುವು ಎಂದರು.
ಪಿಂಚಣಿ, ವಿದ್ಯುತ್ ಸಮಸ್ಯೆ
ಕಳೆದ ಆರೇಳು ತಿಂಗಳಿಂದ ಪಿಂಚಣಿ ಹಣ ಬಂದಿಲ್ಲ ಎಂದು ಜನರು ದೂರುತ್ತಿದ್ದಾರೆ. ಹಬ್ಬದ ಮುನ್ನವೇ ಬಾಕಿ ಪಿಂಚಣಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಜನರ ಪರವಾಗಿ ಸ್ಥಳೀಯವಾಗಿ ಹಾಗೂ ಬೆಂಗಳೂರಿನಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಬಿಪಿಎಲ್ ಕಾರ್ಡ್ ಹಾಗೂ ಅಕ್ಕಿ ವಿತರಣೆಯಲ್ಲೂ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಸಂಭ್ರಮಾಚರಣೆ ಮತ್ತು ಜಾಹೀರಾತುಗಳಿಗೆ ಹೆಚ್ಚಿನ ಒತ್ತು ನೀಡಬಾರದು. ಮೊದಲು ಜನರು ಸಂಭ್ರಮಿಸುವಂತಹ ವಾತಾವರಣ ನಿರ್ಮಿಸಬೇಕು. ಜನರು ಸಂಕಷ್ಟದಲ್ಲಿದ್ದರೆ ಸರ್ಕಾರದ ಸಂಭ್ರಮ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸಿ.ಟಿ. ರವಿ ಎಚ್ಚರಿಸಿದರು.