Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಲಂಚಕ್ಕೆ ‘ಧರ್ಮ’ದ ಹೆಸರಿಡಬೇಡಿ: ಸರ್ಕಾರದ ವಿರುದ್ಧ ಡಾ. ರವಿ ಸಿ.ಟಿ. ವಾಗ್ದಾಳಿ

By ANU News
September 22, 2026 2 Min Read
0

ಬೆಂಗಳೂರು: ಸಚಿವ ಶಿವಲಿಂಗೇಗೌಡ ಅವರು ಲಂಚದ ಕುರಿತು ನೀಡಿರುವ ಹೇಳಿಕೆಗೆ ರಾಜ್ಯ ಸರ್ಕಾರದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಲಂಚಕ್ಕೆ ಧರ್ಮದ ಹೆಸರಿಡಬೇಡಿ. ಲಂಚವನ್ನು ಲಂಚ ಎಂದೇ ಕರೆಯಿರಿ. ಭ್ರಷ್ಟಾಚಾರಕ್ಕೆ ಧರ್ಮದ ಲೇಪ ನೀಡುವುದು ಸರಿಯಲ್ಲ” ಎಂದು ಸಚಿವರ ಹೇಳಿಕೆಯನ್ನು ಟೀಕಿಸಿದರು.

ಸರ್ಕಾರವೇ ಲಂಚದ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರೆ, ಪ್ರತಿ ಇಲಾಖೆಯಲ್ಲಿ ಯಾವ ಕೆಲಸಕ್ಕೆ ಎಷ್ಟು ಲಂಚ ನೀಡಬೇಕು ಎಂಬ ‘ರೇಟ್‌ಕಾರ್ಡ್‌’ ಪ್ರಕಟಿಸಲಿ ಎಂದು ಅವರು ವ್ಯಂಗ್ಯವಾಡಿದರು.

ಕಸ್ತೂರಿರಂಗನ್ ವಿಚಾರ ರಾಜಕೀಯಗೊಳಿಸಬೇಡಿ

ಕಸ್ತೂರಿರಂಗನ್ ವರದಿ ಕುರಿತು ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ರವಿ, ವರದಿಯ ಹಿನ್ನೆಲೆಯನ್ನು ರಾಜಕೀಯಗೊಳಿಸದಂತೆ ಸಲಹೆ ನೀಡಿದರು.

ಮಾಧವ ಗಾಡ್ಗೀಳ್ ಸಮಿತಿ ಹಾಗೂ ಕಸ್ತೂರಿರಂಗನ್ ಸಮಿತಿಗಳು ಯಾವಾಗ ಮತ್ತು ಯಾರ ಆಡಳಿತಾವಧಿಯಲ್ಲಿ ರಚನೆಯಾದವು ಎಂಬುದನ್ನು ಪ್ರಶ್ನಿಸಿದ ಅವರು, ಎರಡೂ ಸಮಿತಿಗಳು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲೇ ರಚನೆಯಾಗಿದ್ದವು ಎಂದು ಡಾ. ರವಿ ಸಿ.ಟಿ. ಹೇಳಿದರು.

2010ರಲ್ಲಿ ಜಯರಾಮ್ ರಮೇಶ್ ಪರಿಸರ ಸಚಿವರಾಗಿದ್ದಾಗ ಗಾಡ್ಗೀಳ್ ಸಮಿತಿ ರಚನೆಯಾಗಿತ್ತು. 2012ರಲ್ಲಿ ಜಯಂತಿ ನಟರಾಜನ್ ಪರಿಸರ ಸಚಿವರಾಗಿದ್ದ ಅವಧಿಯಲ್ಲಿ ಕಸ್ತೂರಿರಂಗನ್ ಸಮಿತಿ ರಚನೆಯಾಯಿತು. 2014ರ ಮಾರ್ಚ್‌ನಲ್ಲಿ ಮೊದಲ ಕರಡು ಅಧಿಸೂಚನೆಯೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಹೊರಬಂದಿತ್ತು ಎಂದು ಅವರು ಉಲ್ಲೇಖಿಸಿದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಥವಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಮಾತ್ರ ರಾಜಕೀಯ ಆರೋಪ ಮಾಡುವುದು ತಿರುಗುಬಾಣವಾಗಬಹುದು ಎಂದು ರವಿ ಹೇಳಿದರು.

‘ಪರಿಸರವೂ ಉಳಿಯಲಿ, ಜನಜೀವನವೂ ರಕ್ಷಿಸಲ್ಪಡಲಿ’

ಕಸ್ತೂರಿರಂಗನ್ ವರದಿ ಕುರಿತು ಬಿಜೆಪಿ ನಿಲುವು ‘ಮಧ್ಯಮ ಮಾರ್ಗ’ವಾಗಿದೆ ಎಂದು ರವಿ ತಿಳಿಸಿದರು. “ಪರಿಸರ ಮತ್ತು ಜನರ ಬದುಕು ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಮತ್ತೊಂದನ್ನು ಉಳಿಸಲು ಸಾಧ್ಯವಿಲ್ಲ” ಎಂದರು.

ಪಶ್ಚಿಮಘಟ್ಟ ಪ್ರದೇಶದಲ್ಲಿ ಉಪಗ್ರಹ ಹಾಗೂ ವೈಮಾನಿಕ ಸಮೀಕ್ಷೆಗಳ ಜತೆಗೆ ಪ್ರತಿ ಗ್ರಾಮ ಮತ್ತು ಸರ್ವೆ ನಂಬರ್‌ ಆಧಾರದಲ್ಲಿ ನೆಲಮಟ್ಟದ ಸಮೀಕ್ಷೆ ನಡೆಸಬೇಕು. ನೈಸರ್ಗಿಕ ಮತ್ತು ಸಾಂಸ್ಕೃತಿಕ ಭೂಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಆಗ್ರಹಿಸಿದರು.

ಪಶ್ಚಿಮಘಟ್ಟದ ಜನರಿಗೆ ಆರ್ಥಿಕ ಪ್ರೋತ್ಸಾಹ

ಪಶ್ಚಿಮಘಟ್ಟ ಸಂರಕ್ಷಣೆಯಲ್ಲಿ ಅಲ್ಲಿನ ಜನರ ಪಾತ್ರವನ್ನು ಗುರುತಿಸಿ ಆರ್ಥಿಕ ಪ್ರೋತ್ಸಾಹ ನೀಡಬೇಕು ಎಂದು ರವಿ ಸಲಹೆ ನೀಡಿದರು.

ಹಸಿರು ತೆರಿಗೆ ಅಥವಾ ಸೆಸ್ ಮೂಲಕ ಸಂಗ್ರಹವಾಗುವ ಹಣದ ಒಂದು ಭಾಗವನ್ನು ಪಶ್ಚಿಮಘಟ್ಟ ಪ್ರದೇಶದ ಜನರ ಅಭಿವೃದ್ಧಿಗೆ ಬಳಸಬಹುದು. ಕಾವೇರಿ, ತುಂಗಭದ್ರಾ, ಹೇಮಾವತಿ ನೀರನ್ನು ಬಳಸುವ ಪ್ರದೇಶಗಳಿಂದ ನಿರ್ದಿಷ್ಟ ಸೆಸ್ ಸಂಗ್ರಹಿಸಿ ಕ್ರಮವಾಗಿ ಕೊಡಗು, ಚಿಕ್ಕಮಗಳೂರು–ಶಿವಮೊಗ್ಗ ಹಾಗೂ ಹಾಸನ ಭಾಗದ ಜನರಿಗೆ ಪ್ರೋತ್ಸಾಹ ನೀಡುವ ಕುರಿತು ಅವರು ಪ್ರಸ್ತಾಪಿಸಿದರು.

ಸ್ಥಳೀಯ ಸಮಸ್ಯೆಗಳಿಗೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೇ ಪರಿಹಾರ ದೊರೆಯುವ ವ್ಯವಸ್ಥೆ ರೂಪಿಸಬೇಕು. ವಿಶೇಷ ಅದಾಲತ್‌ಗಳ ಮೂಲಕ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಇತ್ಯರ್ಥಪಡಿಸಬೇಕು. ಪ್ರತಿಯೊಂದು ವಿಚಾರವೂ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ವರೆಗೆ ಹೋಗುವ ಪರಿಸ್ಥಿತಿ ತಪ್ಪಿಸಬೇಕು ಎಂದು ಅವರು ಹೇಳಿದರು.

“ಜನರ ಬದುಕು ಉಳಿಯಬೇಕು, ಪರಿಸರವೂ ಉಳಿಯಬೇಕು. ಈ ಎರಡನ್ನೂ ಸಮತೋಲನಗೊಳಿಸುವ ಮಧ್ಯಮ ಮಾರ್ಗವೇ ನಮ್ಮ ನಿಲುವು” ಎಂದು ಡಾ. ರವಿ ಸಿ.ಟಿ. ಸ್ಪಷ್ಟಪಡಿಸಿದರು.

Author

ANU News

Follow Me
Other Articles
Previous

ಅ.16ಕ್ಕೆ ರಾಜ್ಯಸಭೆ ಚುನಾವಣೆ: ಯುಪಿಯಲ್ಲಿ 10, ಉತ್ತರಾಖಂಡದಲ್ಲಿ 1 ಸ್ಥಾನಕ್ಕೆ ಮತದಾನ

Next

Don’t call bribery ‘dharma’: C.T. Ravi targets Karnataka govt over minister’s remarks

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • SC stays inquiry against medical education ACS in Ashwin Hebbar case
    • ವೈದ್ಯಕೀಯ ಶಿಕ್ಷಣ ಇಲಾಖೆ ACS ವಿರುದ್ಧದ ಇಲಾಖಾ ವಿಚಾರಣೆಗೆ ತಡೆ; ಪ್ರಾಧ್ಯಾಪಕರ ಅಮಾನತು ಆದೇಶ ಮುಂದುವರಿಸಿದ ಸುಪ್ರೀಂ ಕೋರ್ಟ್‌
    • UKP site allotment row: Chaluvarayaswamy orders FIRs, strict action against guilty
    • ಯುಕೆಪಿ ನಿವೇಶನ ಹಂಚಿಕೆ ಅಕ್ರಮ: ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಿ – ಸಚಿವ ಎನ್. ಚಲುವರಾಯಸ್ವಾಮಿ ಖಡಕ್ ಸೂಚನೆ
    • Don’t call bribery ‘dharma’: C.T. Ravi targets Karnataka govt over minister’s remarks
    Copyright 2026 — ANU News. All rights reserved. Blogsy WordPress Theme