Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಯುಕೆಪಿ ನಿವೇಶನ ಹಂಚಿಕೆ ಅಕ್ರಮ: ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಿ – ಸಚಿವ ಎನ್. ಚಲುವರಾಯಸ್ವಾಮಿ ಖಡಕ್ ಸೂಚನೆ

By ANU News
September 22, 2026 2 Min Read
0

​ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ–1 ಮತ್ತು 2ರಲ್ಲಿ ಮುಳುಗಡೆ ಸಂತ್ರಸ್ತರಿಗೆ ಹಂಚಿಕೆ ಮಾಡಿರುವ ನಿವೇಶನಗಳಲ್ಲಿನ ಅಕ್ರಮಗಳ ಕುರಿತು ತನಿಖೆ ಚುರುಕುಗೊಳಿಸಿ, ತಪ್ಪಿತಸ್ಥರು ಹಾಗೂ ಅಕ್ರಮಕ್ಕೆ ಸಹಕರಿಸಿದವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ನಡೆದ ಕೋಲ್ಹಾರ ಪುನರ್ವಸತಿ ಕೇಂದ್ರದ ಅಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಒಂದೇ ವ್ಯಕ್ತಿಗೆ ಎರಡು–ಮೂರು ನಿವೇಶನ ಹಂಚಿಕೆ, ನಕಲಿ ದಾಖಲೆ ಸೃಷ್ಟಿಸಿ ಅನರ್ಹರಿಗೆ ನಿವೇಶನ ನೀಡಿರುವ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಿವೇಶನ ಹಂಚಿಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳನ್ನು ಅಕ್ಟೋಬರ್ ಅಂತ್ಯದೊಳಗೆ ಇತ್ಯರ್ಥಪಡಿಸಬೇಕು. ಮುಂದಿನ ಸಭೆಯ ವೇಳೆಗೆ ಯಾವುದೇ ಗೊಂದಲ ಉಳಿಯದಂತೆ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಗಡುವು ನೀಡಿದರು.

ಅಭಿವೃದ್ಧಿಪಡಿಸಿರುವ ಬಡಾವಣೆಗಳ ನಕ್ಷೆ ಹಾಗೂ ಅಲ್ಲಿ ಕಲ್ಪಿಸಿರುವ ಮೂಲಸೌಕರ್ಯಗಳ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು. ಇ-ಆಸ್ತಿ ಸೃಷ್ಟಿಗೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆಯೂ ಲಿಖಿತ ಮಾಹಿತಿ ನೀಡುವಂತೆ ನಿರ್ದೇಶಿಸಿದರು.

ಸಭೆಯ ಮಧ್ಯೆಯೇ ಪ್ರಾದೇಶಿಕ ಆಯುಕ್ತೆ ಜಾನಕಿ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ ಚಲುವರಾಯಸ್ವಾಮಿ, ತನಿಖಾ ಸಂಸ್ಥೆಯೊಂದಿಗೆ ತಕ್ಷಣ ಸಮನ್ವಯ ಸಾಧಿಸಿ ಇದುವರೆಗೆ ನಡೆದಿರುವ ತನಿಖೆಯ ಪ್ರಗತಿ ಪರಿಶೀಲಿಸುವಂತೆ ಸೂಚಿಸಿದರು.

ಅಕ್ರಮವಾಗಿ ನಿವೇಶನ ಪಡೆದಿರುವವರಿಂದ ಜಾಗ ತೆರವುಗೊಳಿಸುವುದು ಸೇರಿದಂತೆ ಅಗತ್ಯ ಕಾನೂನು ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಪಾತ್ರವೂ ಪರಿಶೀಲನೆಯಾಗಬೇಕು ಎಂದು ಅವರು ಸೂಚಿಸಿದರು.

ತಾಲೂಕು ಪಂಚಾಯಿತಿ ಇಒ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಪ್ರಾದೇಶಿಕ ಆಯುಕ್ತರೊಂದಿಗೆ ಸಮನ್ವಯ ಸಾಧಿಸಿ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು. ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಯುಕೆಪಿ ಯೋಜನೆಯಡಿ ಒಟ್ಟು 176 ಗ್ರಾಮಗಳು ಮುಳುಗಡೆಯಾಗಿದ್ದು, 3,435 ಸಂತ್ರಸ್ತ ಕುಟುಂಬಗಳಿಗಾಗಿ 1995ರಲ್ಲಿ 5,664 ನಿವೇಶನಗಳ ಪುನರ್ವಸತಿ ಕೇಂದ್ರ ನಿರ್ಮಿಸಲಾಗಿತ್ತು.

ಇವುಗಳಲ್ಲಿ 1,117 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂಬ ಆರೋಪವಿದೆ. ಮಧ್ಯವರ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನರ್ಹರಿಗೆ ನಿವೇಶನ ಕೊಡಿಸಿದ್ದಾರೆ ಎನ್ನಲಾಗಿದ್ದು, 123 ನಿವೇಶನಗಳು ಇಬ್ಬರು ಫಲಾನುಭವಿಗಳಿಗೆ ಹಂಚಿಕೆಯಾಗಿರುವ ಪ್ರಕರಣಗಳು ಪತ್ತೆಯಾಗಿವೆ.

ಈ ಸಂಬಂಧ 2016ರಲ್ಲಿ ಸಿಒಡಿ ತನಿಖೆ ನಡೆದಿದ್ದು, ಎಂಟು ಅಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು ಎಂದು ಸಭೆಯಲ್ಲಿ ತಿಳಿಸಲಾಯಿತು. ವಿಶೇಷ ಭೂಸ್ವಾಧೀನಾಧಿಕಾರಿ (SLO) ಹಾಗೂ ಪುನರ್ವಸತಿ ಅಧಿಕಾರಿ (RO) ಹಂತದ ಅಧಿಕಾರಿಗಳ ಮೇಲೂ ಅಕ್ರಮದ ಆರೋಪಗಳಿವೆ.

ಆದರೆ ಪ್ರಕರಣದ ತನಿಖೆ ಹಾಗೂ ನಿವೇಶನಗಳ ಗೊಂದಲ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ಹಲವು ನಕಲಿ ದಾಖಲೆಗಳ ಮೂಲಕ ಅನರ್ಹರಿಗೆ ನಿವೇಶನ ಹಂಚಿಕೆಯಾಗಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ, ಅರ್ಹ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಶಿವಾನಂದ ಪಾಟೀಲ್, ನೀರಾವರಿ ಇಲಾಖೆಯ ಕಾರ್ಯದರ್ಶಿ ಕುಲಕರ್ಣಿ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Don’t call bribery ‘dharma’: C.T. Ravi targets Karnataka govt over minister’s remarks

Next

UKP site allotment row: Chaluvarayaswamy orders FIRs, strict action against guilty

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • SC stays inquiry against medical education ACS in Ashwin Hebbar case
    • ವೈದ್ಯಕೀಯ ಶಿಕ್ಷಣ ಇಲಾಖೆ ACS ವಿರುದ್ಧದ ಇಲಾಖಾ ವಿಚಾರಣೆಗೆ ತಡೆ; ಪ್ರಾಧ್ಯಾಪಕರ ಅಮಾನತು ಆದೇಶ ಮುಂದುವರಿಸಿದ ಸುಪ್ರೀಂ ಕೋರ್ಟ್‌
    • UKP site allotment row: Chaluvarayaswamy orders FIRs, strict action against guilty
    • ಯುಕೆಪಿ ನಿವೇಶನ ಹಂಚಿಕೆ ಅಕ್ರಮ: ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಿ – ಸಚಿವ ಎನ್. ಚಲುವರಾಯಸ್ವಾಮಿ ಖಡಕ್ ಸೂಚನೆ
    • Don’t call bribery ‘dharma’: C.T. Ravi targets Karnataka govt over minister’s remarks
    Copyright 2026 — ANU News. All rights reserved. Blogsy WordPress Theme