ನೈಸ್ ಯೋಜನೆ: ರೈತರ ಒಂದು ಇಂಚು ಭೂಮಿಯನ್ನೂ ಕಿತ್ತುಕೊಳ್ಳಲು ಬಿಡುವುದಿಲ್ಲ: ಕುಮಾರಸ್ವಾಮಿ
ಬೆಂಗಳೂರು: ನೈಸ್ ಇಂಟಿಗ್ರೇಟೆಡ್ ರಸ್ತೆಯ ಯೋಜನೆಯಿಂದ ಬಾಧಿತವಾಗಿರುವ ಗ್ರಾಮಗಳ ನಿವಾಸಿಗಳಿಂದ ಕೇಂದ್ರ ಸಚಿವ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರು ಅಹವಾಲು ಸ್ವೀಕರಿಸಿದರು.
ಮಾದಾವರ, ಶ್ರೀಕಂಠಪುರ, ಅಂಚೆಪಾಳ್ಯ, ತೋಟದಗುಡ್ಡದಹಳ್ಳಿ ಹಾಗೂ ತಮ್ಮೇನಹಳ್ಳಿ ಗ್ರಾಮಗಳ ನೂರಾರು ಮಂದಿ ಈ ಸಂದರ್ಭದಲ್ಲಿ ನೈಸ್ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ದೂರುಗಳನ್ನು ಸಲ್ಲಿಸಿದರು.
ಈ ಗ್ರಾಮಗಳ ರೈತರು ತಲೆತಲಾಂತರಗಳಿಂದ ನಂಬಿಕೊಂಡು ಬಂದಿರುವ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಸರ್ಕಾರವು ನೈಸ್ ಕಂಪನಿಯೊಂದಿಗೆ ಸೇರಿಕೊಂಡು ರೈತರ ಭೂಮಿ ಕಬಳಿಸಲು ಸಂಚು ರೂಪಿಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
“ಈ ರೈತರ ಜತೆ ನಾನಿದ್ದೇನೆ. ಅವರ ಒಂದು ಇಂಚು ಭೂಮಿಯನ್ನೂ ಕಿತ್ತುಕೊಳ್ಳಲು ಬಿಡುವ ಪ್ರಶ್ನೆಯೇ ಇಲ್ಲ,” ಎಂದು ಅವರು ಸಾರ್ವಜನಿಕರಿಗೆ ಭರವಸೆ ನೀಡಿದರು.

ನೈಸ್ ಯೋಜನೆಯಿಂದ ಬಾಧಿತರಾಗಿರುವ ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಗೌಡ, ಮಾಜಿ ಎಂಎಲ್ಸಿ ಈ. ಕೃಷ್ಣಪ್ಪ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಸೇರಿದಂತೆ ಹಲವು ಮುಖಂಡರು ಹಾಗೂ ಬಾಧಿತ ರೈತರು ಭಾಗವಹಿಸಿದ್ದರು.