Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಒಳ ಮೀಸಲಾತಿ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

By ANU News
April 24, 2026 2 Min Read
0

ಬೆಂಗಳೂರು: ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಎಡ, ಬಲ ಹಾಗೂ ಇತರೇ ಸಮುದಾಯಗಳಿಗೆ 5.25, 5.25 ಮತ್ತು 4.5 ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ.

ಒಳಮೀಸಲಾತಿಗೆ ಸಂಬಂಧಿಸಿದಂತೆ ಇಂದು ನಡೆದ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸುವ ಹೈಕೋರ್ಟ್ ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿಯನ್ನು ಮರು ನಿಗದಿಪಡಿಸಿ ಪರಿಶಿಷ್ಟ ಜಾತಿಗೆ 15% ಹಾಗೂ ಪರಿಶಿಷ್ಟ ವರ್ಗಗಳಿಗೆ ಶೇ3 ರಷ್ಟು ಮೀಸಲಾತಿ ನೀಡಲಾಗಿದೆ. ಒಳಮೀಸಲಾತಿಗೆ ರಚಿಸಲಾಗಿದ್ದ ಕಾಯ್ದೆಗೆ ಅನುಗುಣವಾಗಿ 17% ಮೀಸಲಾತಿಗೆ 6%, 6% ಹಾಗೂ 5% ಇದ್ದರೆ, ಈಗಿನ 15% ಮೀಸಲಾತಿಗೆ 5.3%, 5.3% ಹಾಗೂ 4.4% ಮೀಸಲಾತಿಯನ್ನು ನಿಗದಿ ಮಾಡಿ ವರದಿ ನೀಡಲಾಗಿದ್ದು, ಅಂತಿಮವಾಗಿ ಸಚಿವ ಸಂಪುಟ ಸಭೆಯು ಎಡಗೈ ಸಂಬಂಧಿತ ಜಾತಿಗಳಿಗೆ 5.25%, ಬಲಗೈ ಜಾತಿಗಳಿಗೆ 5.25%, ಬೋವಿ, ಲಂಬಾಣಿ, ಕೊರಚ, ಕೊರಮ ಹಾಗೂ 59 ಅಲೆಮಾರಿ ಜಾತಿಗಳು ಸೇರಿ 4.5% ಮೀಸಲಾತಿ ನೀಡಲು ತೀರ್ಮಾನಿಸಿದೆ ಎಂದರು.

ಈ ನಿರ್ಧಾರದಿಂದ ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ ಸಿಗಲಿದೆ ಎಂದು ವಿಶ್ವಾಸವಿದೆ. ನೇಮಕಾತಿ ಮಾಡುವ ಸಂದರ್ಭದಲ್ಲಿ ಒಳಮೀಸಲಾತಿಯನ್ನು ಇದರನ್ವಯ ನಿರ್ಧರಿಸಲಾಗುವುದು. ಶೇ. ಆರರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯ ಅಂತಿಮವಾಗಿ ತೀರ್ಮಾನ ಕೈಗೊಳ್ಳುವವರೆಗೆ ಅವುಗಳನ್ನು ಬ್ಯಾಕ್ ಲಾಗ್ ಎಂದು ಪರಿಗಣಿಸಲಾಗುವುದು. ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿಯೇ ಮಹತ್ವಪೂರ್ಣ ನಿರ್ಧಾರ ಇದಾಗಿದ್ದು, ರೋಸ್ಟರ್‌ಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ಕೈಗೊಂಡು ರಾಜ್ಯದ ಶೋಷಿತ ವರ್ಗಗಳ ಬದುಕಿನಲ್ಲಿ ತಿರುವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಒಳಮೀಸಲಾತಿ ಕುರಿತು ಬಹುಕಾಲದಿಂದ ಅನೇಕ ಹೋರಾಟಗಳು ನಡೆದಿವೆ. ನಂತರ ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ‌ಈ ಸಮಾವೇಶದಲ್ಲಿ 101 ಪರಿಶಿಷ್ಟ ಜಾತಿಗಳು, ಅಲೆಮಾರಿ ಸಮಾಜ ಸೇರಿದಂತೆ 59 ಜಾತಿಗಳ ಪ್ರತಿನಿಧಿಗಳು ಪಾಲ್ಗೊಂಡು ಒಳಮೀಸಲಾತಿಗೆ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರು. ಗೃಹ ಸಚಿವ ಡಾ: ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪ್ರಣಾಳಿಕಾ ಸಮಿತಿಯಲ್ಲಿಯೂ ಒಳಮೀಸಲಾತಿಯನ್ನು ನಮ್ಮ ಸರ್ಕಾರ ಬಂದಮೇಲೆ ನೀಡಲಿದೆ ಎಂಬ ಭರವಸೆ ನೀಡಲಾಗಿತ್ತು.

ಸುಪ್ರೀಂ ಕೋರ್ಟ್ ಒಳಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ಆಯಾ ರಾಜ್ಯಗಳೇ ತೆಗೆದುಕೊಳ್ಳಬಹುದು ಎಂದು ಆದೇಶ ನೀಡಿದ ನಂತರ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಲಾಯಿತು. ಅವರು ನೀಡಿದ ವರದಿ ಆಧರಿಸಿ ಸಚಿವ ಸಂಪುಟವು ಪರಿಶಿಷ್ಟ ಜಾತಿಯ ಬಲ, ಎಡ ಸಮುದಾಯಗಳು ಹಾಗೂ ಇತರೇ ಅಲೆಮಾರಿ ಜಾತಿಗಳಿಗೆ ಕ್ರಮವಾಗಿ 6%:6%:5% ಮೀಸಲಾತಿ ಕಲ್ಪಿಸುವ ನಿರ್ಧಾರ ತೆಗೆದುಕೊಂಡಿತ್ತು. ಪರಿಶಿಷ್ಟರಿಗೆ ಒಟ್ಟು 24% ಅಂದರೆ 7% ರಷ್ಟು ಎಸ್.ಟಿ ಗೆ ಹಾಗೂ 17% ಎಸ್.ಸಿ ಸಮುದಾಯಗಳಿಗೆ ಮೀಸಲಿಡಲಾಯಿತು. ಹೀಗಾಗಿ ಒಟ್ಟು ಶೇ 56% ರಷ್ಟು ಮೀಸಲಾತಿ ನೀಡಿದಂತಾಯಿತು ಎಂದವರು ವಿವರಿಸಿದರು.

ನ್ಯಾಯಾಲಯವು ಇಂದಿರಾ ಸಹಾನಿ ಪ್ರಕರಣವನ್ನು ಉಲ್ಲೇಖಿಸಿ ಮೀಸಲಾತಿ ಶೇ 50 ರಷ್ಟು ಮೀರಬಾರದು ಎಂದು ಪುನರುಚ್ಛರಿಸಿತ್ತು. ಆದರೆ ಈ ಮೀಸಲಾತಿಗೆ ಅಪಸ್ವರಗಳು ಎದ್ದ ನಂತರ ಗೊಂದಲ ನಿವಾರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ ವರದಿಯನ್ನು ಪಡೆಯಲಾಗಿದೆ. ಅದರಂತೆ ಕೋರ್ಟ್ ಆದೇಶದ ಶೇಕಡ 50 ಮಿತಿಗೆ ಒಳಪಟ್ಟು ಇಂದಿನ ಸಚಿವ ಸಂಪುಟದಲ್ಲಿ ಎಡ, ಬಲ ಹಾಗೂ ಇತರೇ ಸಮುದಾಯಗಳಿಗೆ 5.25%, 5.25% ಹಾಗೂ 4.5% ಮೀಸಲಾತಿ ಕಲ್ಪಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಈಗಾಗಲೇ ಬಜೆಟ್ ನಲ್ಲಿ ಘೋಷಿಸಿರುವಂತೆ ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ, ತುರ್ತು ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರ್ಕಾರವು ಶೇಕಡಾ 56 ಮೀಸಲಾತಿ ನೀಡಬೇಕೆನ್ನುವ ನಿರ್ಧಾರಕ್ಕೆ ಬದ್ಧವಾಗಿದೆ. ಸಿ ಕೆಟಗರಿಯಲ್ಲಿ ನೇಮಕಾತಿಗೆ ಲಭ್ಯವಾಗುವ ಹುದ್ದೆಗಳಲ್ಲಿ ಶೇ.20ರಷ್ಟನ್ನು 59 ಅಲೆಮಾರಿ ಜಾತಿಗಳಿಗೆ ಮೀಸಲಿಡಲು ಸoಪುಟದಲ್ಲಿ ನಿರ್ಧರಿಸಲಾಗಿದೆ. ಈಗ ಪ್ರಸಕ್ತ ತೀರ್ಮಾನದಂತೆ ಸಿ ಕೆಟಗರಿಗೆ 4.5% ಮೀಸಲಾತಿ ಕಲ್ಪಿಸಲಾಗಿದೆ. ಎಂದು ಸಿಎಂ ತಿಳಿಸಿದರು.

ನಮ್ಮ ಸರ್ಕಾರವು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀತಿಗೆ ಬದ್ಧವಾಗಿದ್ದು, ಜನರಿಗೆ ನೀಡಿದ ವಚನದಂತೆ ನಡೆದು ಕೊಂಡಿದ್ದೇವೆ. ದಲಿತ ಸಂಘಟನೆಗಳು ಸೇರಿದಂತೆ ಇತರ ಸಮುದಾಯಗಳು ಈ ನಿರ್ಧಾರವನ್ನು ಸ್ವಾಗತಿಸುವ ವಿಶ್ವಾಸವಿದೆ. ನಮ್ಮ ಸರ್ಕಾರವು ಶೇಕಡ 24 ಮೀಸಲಾತಿಗೆ ಅಂದರೆ ಪರಿಶಿಷ್ಟ ಜಾತಿಗೆ ಶೇಕಡಾ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡಾ 7ರ ತೀರ್ಮಾನಕ್ಕೆ ಬದ್ಧವಾಗಿದೆ. ಭವಿಷ್ಯದಲ್ಲಿ ಶೇಕಡ 17ರಷ್ಟು ಮೀಸಲಾತಿ ಕಲ್ಪಿಸಬಹುದು ಎಂದು ಕೋರ್ಟ್ ತೀರ್ಪು ಸರ್ಕಾರದ ಪರವಾಗಿ ಬಂದಲ್ಲಿ ಈ ಹಿಂದೆ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ 6%, 6% ಹಾಗೂ 5% ಮೀಸಲಾತಿ ತೀರ್ಮಾನದಂತೆ ಶೇಕಡ 6 ಅನ್ನು ಬ್ಯಾಕ್ ಲಾಗ್ ಎಂದು ತೀರ್ಮಾನಿಸಲಾಗುವುದು ಎಂದರು.

–

Author

ANU News

Follow Me
Other Articles
Previous

ಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನಲ್ಲಿ ಜಯದೇವ 100 ಹಾಸಿಗೆ ಕಾರ್ಡಿಯಾಕ್ ಹಬ್ ಘಟಕ

Next

OSA ಇರುವವರಿಗೆ ಹೃದಯ ಅಪಾಯ 71% ಹೆಚ್ಚಳ: ಅಧ್ಯಯನ ಎಚ್ಚರಿಕೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • As protests rock Europe, Goyal praises Indian community for discipline and family values
    • ಭಾರತೀಯರು ಶಾಂತಿಪ್ರಿಯರು, ಬೀದಿಗಿಳಿದು ಸಮಾಜಕ್ಕೆ ತೊಂದರೆ ಕೊಡುವುದಿಲ್ಲ: ಪಿಯೂಷ್ ಗೋಯಲ್
    • ISRO Targets Four Launch Pads by 2029; Gaganyaan Test Expected Soon
    • 2029ರ ವೇಳೆಗೆ ಇಸ್ರೋಗೆ ನಾಲ್ಕು ಕಾರ್ಯನಿರ್ವಹಣಾ ಉಡಾವಣಾ ಪ್ಯಾಡ್; ಗಗನಯಾನದ ಮೊದಲ ಮಾನವರಹಿತ ಪರೀಕ್ಷೆ ಶೀಘ್ರ
    • Tamil Nadu Governor Congratulates Thulasimathi Murugesan on Asian Para Games Success
    Copyright 2026 — ANU News. All rights reserved. Blogsy WordPress Theme