ಕಾಂಗ್ರೆಸ್ ಸಮಿತಿಗಳಿಗೆ ಕೋಟ್ಯಂತರ ರೂ. ಖರ್ಚು; ರೈತರು, ಆಶಾ ಕಾರ್ಯಕರ್ತೆಯರಿಗೆ ಹಣವಿಲ್ಲ: ಬಿಜೆಪಿ ಆಕ್ರೋಶ
ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಪಕ್ಷದ ಸಮಿತಿಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ, ರೈತರಿಗೆ ಬರ ಪರಿಹಾರ ಮತ್ತು ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಗೌರವಧನ ನೀಡಲು ಹಣವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದಾಗಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದರು. ಆದರೆ ಕೊರೆಯುವ ಚಳಿಯಲ್ಲಿ ಮಕ್ಕಳೊಂದಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. 10 ಸಾವಿರ ಮಹಿಳೆಯರಿಗೆ ಕೇವಲ ಎಂಟು ಶೌಚಾಲಯಗಳಿದ್ದು, ಕುಡಿಯುವ ನೀರು ಮತ್ತು ಹಾಲುಣಿಸುವ ತಾಯಂದಿರಿಗೆ ಅಗತ್ಯ ವ್ಯವಸ್ಥೆಯನ್ನೂ ಮಾಡಿಲ್ಲ. ಚಳಿಯಿಂದ ಮಹಿಳೆಯರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ₹15,000 ನೀಡುವ ಭರವಸೆಯೂ ಈಡೇರಿಲ್ಲ ಎಂದರು.

ಆಡಂಬರದ ದಸರಾ, ಮುಖ್ಯಮಂತ್ರಿ ನಿವಾಸ ಮತ್ತು ಕಚೇರಿಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಭಾರತ್ ಜೋಡೋ ಸಂಘಗಳು ಕಾಂಗ್ರೆಸ್ನ ಗಂಜಿ ಕೇಂದ್ರಗಳಾಗಿದ್ದು, ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೂ ಜನರ ತೆರಿಗೆ ಹಣ ವ್ಯಯಿಸಲಾಗುತ್ತಿದೆ ಎಂದು ದೂರಿದರು.
ಗೃಹಲಕ್ಷ್ಮಿ ಯೋಜನೆಯಡಿ ಮೂರೂವರೆ ವರ್ಷಗಳಲ್ಲಿ ಪ್ರತಿ ಕುಟುಂಬಕ್ಕೆ ₹84,000 ನೀಡಬೇಕಿದ್ದರೂ, ಇದುವರೆಗೆ ₹30,000ರಿಂದ ₹35,000 ಮಾತ್ರ ನೀಡಲಾಗಿದೆ. ಬರಗಾಲದಲ್ಲೂ ರೈತರಿಗೆ ಪರಿಹಾರ ನೀಡದ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ಬಿಜೆಪಿ ಆಡಳಿತದಲ್ಲಿ ಎನ್ಡಿಆರ್ಎಫ್ ಮಾನದಂಡಕ್ಕಿಂತ ದುಪ್ಪಟ್ಟು ಪರಿಹಾರ ನೀಡಲಾಗಿತ್ತು ಎಂದು ಹೇಳಿದರು.
ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾನೂನುಗಳನ್ನು ರದ್ದುಪಡಿಸಲು ಅವಕಾಶ ನೀಡುವುದಿಲ್ಲ. ಕೆಪಿಎಸ್ಸಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಆನೆಗಳ ಸಮಸ್ಯೆಗೂ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ಸರ್ಕಾರದ ವಿರುದ್ಧ ಹೋರಾಟದ ಕಾರ್ಯತಂತ್ರ ರೂಪಿಸಲು ನವೆಂಬರ್ 26ರಂದು ಬೆಂಗಳೂರಿನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದು ತಿಳಿಸಿದರು.