ನಕಲಿ ಔಷಧ ಜಾಲದ ಕಿಂಗ್‌ಪಿನ್ ಪ್ರಶಾಂತ್ ಬಂಧನ
ಬೆಂಗಳೂರು: ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ತಯಾರಿಕೆ ಮತ್ತು ಪೂರೈಕೆ ಜಾಲದ ತನಿಖೆ ಮತ್ತೊಂದು ಹಂತ ತಲುಪಿದ್ದು, ಪ್ರಕರಣದ ಪ್ರಮುಖ ಆರೋಪಿ ಎಂದು ಶಂಕಿಸಲಾಗಿರುವ ಪ್ರಶಾಂತ್ ರಂಜನ್ ಬಾಬು ಎಂಬಾತನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ.

ಪ್ರಶಾಂತ್ ವಿರುದ್ಧ ಈಗಾಗಲೇ ಲುಕ್‌ಔಟ್ ನೋಟಿಸ್ ಜಾರಿಯಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಆತ ಅಜರ್‌ಬೈಜಾನ್‌ನಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸೋಮವಾರ ಮುಂಜಾನೆ ಅಜರ್‌ಬೈಜಾನ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ, ಲುಕ್‌ಔಟ್ ನೋಟಿಸ್ ಆಧರಿಸಿ ಎಸ್‌ಐಟಿ ಅಧಿಕಾರಿಗಳು ಆತನನ್ನು ಆಗಮನ ವಿಭಾಗದಲ್ಲೇ ವಶಕ್ಕೆ ಪಡೆದಿದ್ದಾರೆ.
ನಂತರ ಪ್ರಶಾಂತ್‌ನನ್ನು ಎಸಿಪಿ ಅಂಜನ್ ಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ. ನಕಲಿ ಔಷಧ ಪ್ರಕರಣದ ತನಿಖೆ ಸಂದರ್ಭದಲ್ಲಿ ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿರುವುದು ಪತ್ತೆಯಾಗಿತ್ತು. ಸೆಪ್ಟೆಂಬರ್ 9ರಂದು ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳ ವಶದಲ್ಲಿದ್ದ ಎನ್ನಲಾಗಿದೆ.
ಭಾರತ ಮತ್ತು ಅಜರ್‌ಬೈಜಾನ್ ನಡುವೆ ಆರೋಪಿಯನ್ನು ನೇರವಾಗಿ ಹಸ್ತಾಂತರಿಸಿಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ, ಆತ ಭಾರತಕ್ಕೆ ಮರಳುವವರೆಗೆ ತನಿಖಾ ಸಂಸ್ಥೆಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಭಾರತಕ್ಕೆ ಮರಳುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.
ತನಿಖೆಯಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ವೀರೇಶ್ ಜೈನ್ ಕೂಡ ಎಸ್‌ಐಟಿ ಗಮನದಲ್ಲಿದ್ದಾನೆ. ಆಸ್ಪತ್ರೆಗಳು ಮತ್ತು ಮೆಡಿಕಲ್‌ಗಳಿಗೆ ನಕಲಿ ಔಷಧಗಳನ್ನು ಪೂರೈಸುವ ಜಾಲದಲ್ಲಿ ವೀರೇಶ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಈ ನಕಲಿ ಔಷಧ ಪೂರೈಕೆ ಜಾಲದ ವಾರ್ಷಿಕ ವಹಿವಾಟು ಸುಮಾರು ₹15 ಕೋಟಿ ಇತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜಾಲದ ಕಾರ್ಯವಿಧಾನ, ಹಣಕಾಸಿನ ವ್ಯವಹಾರ ಹಾಗೂ ನಕಲಿ ಔಷಧಗಳನ್ನು ಎಲ್ಲೆಲ್ಲಿ ಪೂರೈಸಲಾಗುತ್ತಿತ್ತು ಎಂಬುದರ ಕುರಿತು ಎಸ್‌ಐಟಿ ತನಿಖೆ ಮುಂದುವರಿಸಿದೆ.