ಗೋಲ್ಡಿ ಬ್ರಾರ್‌ಗೆ ಎಫ್‌ಬಿಐ ಟಾಪ್ 10 ವಾಂಟೆಡ್ ಪಟ್ಟಿಯಲ್ಲಿ ಸ್ಥಾನ ಬಂಧನಕ್ಕೆ ಮಾಹಿತಿ ನೀಡಿದವರಿಗೆ ₹8.3 ಕೋಟಿ ಬಹುಮಾನ ಘೋಷಣೆ
ವಾಷಿಂಗ್ಟನ್: ಕುಖ್ಯಾತ ಗ್ಯಾಂಗ್‌ಸ್ಟರ್ ಸತೀಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್‌ಗೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಭಾರೀ ಶಾಕ್ ನೀಡಿದೆ. ಗೋಲ್ಡಿ ಬ್ರಾರ್‌ನನ್ನು ಎಫ್‌ಬಿಐ ತನ್ನ ‘ಟಾಪ್ 10 ಮೋಸ್ಟ್ ವಾಂಟೆಡ್ ಫ್ಯುಗಿಟಿವ್ಸ್’ ಪಟ್ಟಿಗೆ ಸೇರಿಸಿದ್ದು, ಆತನ ಬಂಧನಕ್ಕೆ ಕಾರಣವಾಗುವ ನಿಖರ ಮಾಹಿತಿ ನೀಡಿದವರಿಗೆ 1 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹8.3 ಕೋಟಿ) ಬಹುಮಾನ ಘೋಷಿಸಿದೆ.
ಎಫ್‌ಬಿಐ ಪ್ರಕಾರ, ಗೋಲ್ಡಿ ಬ್ರಾರ್ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಸಂಘಟಿತ ಅಪರಾಧ ಜಾಲದೊಂದಿಗೆ ಸಂಪರ್ಕ ಹೊಂದಿದ್ದು, ಅಮೆರಿಕ ಮತ್ತು ಕೆನಡಾದಲ್ಲಿ ನಡೆಯುತ್ತಿರುವ ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ.

ಕೊಲೆ, ಗುಂಡಿನ ದಾಳಿ, ಅಪಹರಣ, ಸುಲಿಗೆ, ಹಲ್ಲೆ, ಮಾದಕ ವಸ್ತು ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಗೋಲ್ಡಿ ಬ್ರಾರ್ ಭಾಗಿಯಾಗಿದ್ದಾನೆ ಎಂದು ಎಫ್‌ಬಿಐ ಆರೋಪಿಸಿದೆ. ರಾಜಕೀಯ ಮತ್ತು ಧಾರ್ಮಿಕ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸಿದ ಆರೋಪಗಳೂ ಆತನ ವಿರುದ್ಧವಿವೆ.
ಗೋಲ್ಡಿ ಬ್ರಾರ್ ಶಸ್ತ್ರಸಜ್ಜಿತ ಮತ್ತು ಅಪಾಯಕಾರಿ ವ್ಯಕ್ತಿಯಾಗಿದ್ದು, ಬಂಧನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಎಫ್‌ಬಿಐ ಎಚ್ಚರಿಸಿದೆ. ಆತ ಪ್ರಸ್ತುತ ಅಮೆರಿಕದಲ್ಲಿದ್ದು, ಉತ್ತರ ಅಮೆರಿಕಾದಲ್ಲಿ ಸಂಘಟಿತ ಅಪರಾಧ ಜಾಲದ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದಾನೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಜುಲೈ 1ರಂದು ಬಂಧನ ವಾರಂಟ್
ಲಾಸ್ ಏಂಜಲೀಸ್‌ನಲ್ಲಿರುವ ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನ ಅಮೆರಿಕ ಜಿಲ್ಲಾ ನ್ಯಾಯಾಲಯವು ಜುಲೈ 1, 2026ರಂದು ಗೋಲ್ಡಿ ಬ್ರಾರ್ ವಿರುದ್ಧ ಫೆಡರಲ್ ಬಂಧನ ವಾರಂಟ್ ಹೊರಡಿಸಿದೆ. ರಾಕೆಟಿಯರ್ ಇನ್‌ಫ್ಲುಯೆನ್ಸ್ಡ್ ಅಂಡ್ ಕರಪ್ಟ್ ಆರ್ಗನೈಸೇಶನ್ಸ್ (RICO) ಕಾಯ್ದೆಯಡಿ ಪಿತೂರಿ ಸೇರಿದಂತೆ ಹಲವು ಆರೋಪಗಳನ್ನು ಆತನ ವಿರುದ್ಧ ಹೊರಿಸಲಾಗಿದೆ.
ಭಾರತ ಮೂಲದ ಅಂತಾರಾಷ್ಟ್ರೀಯ ಸಂಘಟಿತ ಅಪರಾಧ ಜಾಲಗಳ ವಿರುದ್ಧ ನಡೆದ ‘ಆಪರೇಷನ್ ಹಾರ್ಡ್‌ಬಾಲ್’ ತನಿಖೆಯಲ್ಲಿ ಗುರುತಿಸಲಾದ ಪ್ರಮುಖ ಪರಾರಿಯಾದ ಆರೋಪಿಗಳಲ್ಲಿ ಗೋಲ್ಡಿ ಬ್ರಾರ್ ಕೂಡ ಒಬ್ಬನಾಗಿದ್ದಾನೆ.
ಜುಲೈನಲ್ಲಿ ಅಮೆರಿಕ ಅಧಿಕಾರಿಗಳು ಇಂತಹ ಮೂರು ಸಂಘಟಿತ ಅಪರಾಧ ಜಾಲಗಳಿಗೆ ಸಂಬಂಧಿಸಿದ 37 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಹಲವು ದೇಶಗಳಲ್ಲಿ ಜಾಲ
ಪಂಜಾಬ್‌ನಲ್ಲಿ ಜನಿಸಿರುವ ಗೋಲ್ಡಿ ಬ್ರಾರ್ ಪಂಜಾಬಿ ಮತ್ತು ಇಂಗ್ಲಿಷ್ ಭಾಷೆ ಮಾತನಾಡಬಲ್ಲವನಾಗಿದ್ದಾನೆ. ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಮತ್ತು ಫ್ರೆಸ್ನೋ ಸೇರಿದಂತೆ ಕೆನಡಾ, ಭಾರತ ಹಾಗೂ ಮೆಕ್ಸಿಕೊದಲ್ಲೂ ಆತನಿಗೆ ಜಾಲ ಮತ್ತು ಕಾರ್ಯಾಚರಣೆಯ ಸಂಪರ್ಕಗಳಿವೆ ಎಂದು ಎಫ್‌ಬಿಐ ತಿಳಿಸಿದೆ.
ಆತನ ಇರುವಿಕೆಯ ಬಗ್ಗೆ ಮಾಹಿತಿ ಹೊಂದಿರುವವರು ಎಫ್‌ಬಿಐಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು, ಗೋಲ್ಡಿ ಬ್ರಾರ್‌ನನ್ನು ಸ್ವತಃ ಸಂಪರ್ಕಿಸಲು ಅಥವಾ ಸಮೀಪಿಸಲು ಮುಂದಾಗಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.