WTO ನಿಯಮ ಪಾಲಿಸಿಯೇ ಡಂಪಿಂಗ್ ತಡೆಗೆ ಕ್ರಮ: ಪಿಯೂಷ್ ಗೋಯಲ್
ಮಿಲ್ವಾಕಿ: ಜಾಗತಿಕ ವ್ಯಾಪಾರದಲ್ಲಿನ ಅಸಮತೋಲನ, ಡಂಪಿಂಗ್ ಹಾಗೂ ಅಸಮಂಜಸ ಬೆಲೆ ನಿಗದಿ ಸಮಸ್ಯೆಗಳನ್ನು ವಿಶ್ವ ವ್ಯಾಪಾರ ಸಂಸ್ಥೆ (WTO) ನಿಯಮಗಳಿಗೆ ಅನುಗುಣವಾಗಿಯೇ ಪರಿಹರಿಸಬೇಕು ಎಂದು ಭಾರತ ಒತ್ತಾಯಿಸಿದೆ.
ಅಮೆರಿಕದ ಮಿಲ್ವಾಕಿಯಲ್ಲಿ ನಡೆದ G20 ವಾಣಿಜ್ಯ ಮತ್ತು ಹೂಡಿಕೆ ಸಚಿವರ ಸಭೆಯ ಸಮಾರೋಪ ದಿನ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಕೆಲವು ದೇಶಗಳಲ್ಲಿ ವ್ಯಾಪಾರವನ್ನು ವಿರೂಪಗೊಳಿಸುವ ರೀತಿಯ ಸರ್ಕಾರಿ ಬೆಂಬಲದಿಂದ ಡಂಪಿಂಗ್ ಮತ್ತು ಪ್ರಿಡೇಟರಿ ಪ್ರೈಸಿಂಗ್‌ಗೆ ಉತ್ತೇಜನ ಸಿಗುತ್ತಿರುವ ಬಗ್ಗೆ ಹಲವು ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಭಾರತವೂ ಈ ಕಳವಳವನ್ನು ಹಂಚಿಕೊಳ್ಳುತ್ತದೆ ಎಂದು ಹೇಳಿದರು.
ಇಂತಹ ಸಮಸ್ಯೆಗಳಿಗೆ WTO ನಿಯಮಗಳಿಗೆ ಅನುಗುಣವಾದ ಕ್ರಮಗಳೇ ಪರಿಹಾರವಾಗಬೇಕು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆಂಟಿ-ಡಂಪಿಂಗ್ ಹಾಗೂ ಕೌಂಟರ್‌ವೈಲಿಂಗ್ ಸುಂಕ ವಿಧಿಸುವುದು ಮತ್ತು ಅಂತಹ ಕ್ರಮಗಳನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸುವುದು ನಿಯಮಬದ್ಧ ಮಾರ್ಗಗಳಾಗಿವೆ ಎಂದು ಗೋಯಲ್ ತಿಳಿಸಿದರು.

ಕೈಗಾರಿಕಾ ಉತ್ಪಾದನಾ ಸಾಮರ್ಥ್ಯ ಹೆಚ್ಚಿರುವುದೇ ಸಮಸ್ಯೆಯಲ್ಲ. ಆದರೆ ಕೆಲ ಪ್ರದೇಶಗಳಲ್ಲಿ ಉತ್ಪಾದನೆ ಅತಿಯಾಗಿ ಕೇಂದ್ರೀಕೃತವಾಗಲು ಅಡಗಿದ ಸಬ್ಸಿಡಿಗಳು ಹಾಗೂ ಸರ್ಕಾರದ ಬೆಂಬಲ ಕಾರಣವಾದರೆ, ಅದು ಜಾಗತಿಕ ವ್ಯಾಪಾರದಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು.
ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳ ವೈವಿಧ್ಯೀಕರಣ ಅಗತ್ಯ. ಆದರೆ ಅದನ್ನು WTO ನಿಯಮಗಳ ಹೊರಗಿನ ಕ್ರಮಗಳಿಗೆ ನೆಪವಾಗಿ ಬಳಸಬಾರದು. ಇಂತಹ ಕ್ರಮಗಳಿಂದ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೆಚ್ಚಿನ ಹೊರೆ ಬೀಳದಂತೆ ನೋಡಿಕೊಳ್ಳಬೇಕು ಎಂದು ಗೋಯಲ್ ಒತ್ತಿಹೇಳಿದರು.
1.4 ಶತಕೋಟಿ ಜನರ ಭಾರತ
ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. 1.4 ಶತಕೋಟಿ ಜನರ ದೇಶೀಯ ಬೇಡಿಕೆಯನ್ನು ಆಧರಿಸಿದ ಬಲಿಷ್ಠ ಆರ್ಥಿಕತೆ ಭಾರತದಲ್ಲಿದೆ ಎಂದು ಗೋಯಲ್ ಹೇಳಿದರು.
ವಿನ್ಯಾಸದಿಂದ ಹಿಡಿದು ಸಿದ್ಧ ಉತ್ಪನ್ನಗಳವರೆಗೆ ಸಂಪೂರ್ಣ ಉತ್ಪಾದನಾ ಮೌಲ್ಯ ಸರಪಳಿಯನ್ನು ಭಾರತ ನಿರ್ಮಿಸುತ್ತಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಸ್ಥಾನ ಮತ್ತಷ್ಟು ಬಲಗೊಳ್ಳುತ್ತಿದೆ ಎಂದರು.
ದೇಶೀಯ ಹಾಗೂ ಜಾಗತಿಕ ಬೇಡಿಕೆಗಳನ್ನು ಪೂರೈಸುವಷ್ಟು ಭಾರತದ ಉತ್ಪಾದನಾ ಸಾಮರ್ಥ್ಯವಿದೆ. G20 ಚರ್ಚೆಗಳಲ್ಲಿ ಗುರುತಿಸಲಾದ ಕ್ಷೇತ್ರಗಳಲ್ಲಿ ಭಾರತಕ್ಕೆ ಯಾವುದೇ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪಾರದರ್ಶಕ ವ್ಯಾಪಾರ ವ್ಯವಸ್ಥೆಗೆ ಒತ್ತು
G20 ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರವು ಪಾರದರ್ಶಕ, ತಾರತಮ್ಯರಹಿತ ಮತ್ತು ನಿಯಮಾಧಾರಿತ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ ಎಂದು ಗೋಯಲ್ ಹೇಳಿದರು.
Most-Favoured-Nation (MFN) ತತ್ವವು ಈ ವ್ಯವಸ್ಥೆಯ ಪ್ರಮುಖ ಆಧಾರವಾಗಿದ್ದು, ಸಣ್ಣ ರಾಷ್ಟ್ರವಾಗಲಿ ಅಥವಾ ದೊಡ್ಡ ಆರ್ಥಿಕತೆಯಾಗಲಿ ಎಲ್ಲರಿಗೂ ಸಮಾನ ವ್ಯಾಪಾರ ನಿಯಮಗಳು ಅನ್ವಯಿಸುವುದನ್ನು ಖಚಿತಪಡಿಸುತ್ತದೆ ಎಂದರು.
ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಬಲವಂತದ ಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸುವ ಭಾರತದ ಬದ್ಧತೆ ಸಂಪೂರ್ಣ ಮತ್ತು ಯಾವುದೇ ಷರತ್ತಿಲ್ಲದ್ದು ಎಂದು ಗೋಯಲ್ ತಿಳಿಸಿದರು.
WTO ಕೇಂದ್ರವಾಗಿರುವ ನಿಯಮಾಧಾರಿತ, ನ್ಯಾಯಸಮ್ಮತ, ಸಮಾನ, ತಾರತಮ್ಯರಹಿತ, ಪಾರದರ್ಶಕ, ಮುಕ್ತ ಮತ್ತು ಒಳಗೊಳ್ಳುವ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗೆ ಭಾರತ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಜನರ ಅಭಿವೃದ್ಧಿ ಹಾಗೂ ಆಹಾರ ಭದ್ರತೆಗಾಗಿ ಅಗತ್ಯವಿರುವ ನೀತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು. ಜತೆಗೆ, ಜಾಗತಿಕ ವ್ಯಾಪಾರ ನಿರ್ಧಾರಗಳಲ್ಲಿ ಒಮ್ಮತದ ತತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಗೋಯಲ್ ಹೇಳಿದರು.
ಸಭೆಯ ಅಂಚಿನಲ್ಲಿ ಗೋಯಲ್ ಅವರು ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳ ವಾಣಿಜ್ಯ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.