Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕೃತಕ ಬುದ್ಧಿಮತ್ತೆ ಸವಾಲುಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರ: RSS ಸಹಸರಕಾರ್ಯವಾಹ ಸಿ.ಆರ್.ಮುಕುಂದ

By ANU News
September 18, 2026 2 Min Read
0

ಬೆಂಗಳೂರು: ಕೃತಕ ಬುದ್ಧಿಮತ್ತೆಯಿಂದ ಎದುರಾಗುತ್ತಿರುವ ಸವಾಲುಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರ ನೀಡುವ ಶಕ್ತಿ ಇದೆ. ಈ ಸವಾಲುಗಳಿಗೆ ಭಾರತೀಯ ಪರಿಹಾರಗಳನ್ನು ಜಗತ್ತಿಗೆ ಅರ್ಥವಾಗುವ ಭಾಷೆಯಲ್ಲಿ ತಲುಪಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ.ಆರ್. ಪ್ರತಿಪಾದಿಸಿದ್ದಾರೆ 

ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ‘ಗುರುವಂದನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಶತಮಾನದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾದರೂ ಗುರುವಿನ ಸ್ಥಾನಮಾನ ಮುಂದುವರಿದಿತ್ತು. ಆದರೆ ಹಣ, ತಂತ್ರಜ್ಞಾನ ಸೇರಿದಂತೆ ಬದಲಾಗುತ್ತಿರುವ ಸಾಮಾಜಿಕ ವಾತಾವರಣದಲ್ಲಿ ಗುರುವಿನ ಸ್ಥಾನ ಹಲವು ಕಾರಣಗಳಿಂದ ಕುಗ್ಗುತ್ತಿದೆ ಎಂದರು.

‘ಜ್ಞಾನಪರಂಪರೆಯನ್ನು ವರ್ತಮಾನಕ್ಕೆ ತಲುಪಿಸಬೇಕು’

ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಂವಹನದ ಬದಲಾವಣೆಗಳನ್ನು ಗಮನಿಸಬೇಕು. ಅಗಾಧ ಭಾರತೀಯ ಜ್ಞಾನಪರಂಪರೆಯನ್ನು ವರ್ತಮಾನಕ್ಕೆ ಹೇಗೆ ತಲುಪಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಹಲವು ಗುರುಗಳು ನಮ್ಮ ನಡುವೆ ಇದ್ದಾರೆ. ಅವರಿಗೆ ಸಲ್ಲಿಸುವ ಗುರುವಂದನೆ ವ್ಯಕ್ತಿಗಳಿಗೆ ಮಾತ್ರವಲ್ಲ, ‘ಗುರು’ ಎಂಬ ವಿಶಿಷ್ಟ ಪರಿಕಲ್ಪನೆಗೆ ಸಲ್ಲಿಸುವ ಗೌರವವೂ ಹೌದು ಎಂದು ಹೇಳಿದರು.

ಇಂದಿನ ಶಿಕ್ಷಣದಲ್ಲಿ ಶ್ರದ್ಧೆ ಮತ್ತು ಜೀವನ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಕೇವಲ ಮಾಹಿತಿ ವ್ಯಕ್ತಿತ್ವ ರೂಪಿಸುವುದಿಲ್ಲ. ಅರಿವು ಮೂಡಿಸುವುದು ಗುರುವಿನ ಪ್ರಮುಖ ಕಾರ್ಯವಾಗಿದ್ದು, ಅದು ಗುರುವಿನ ಸಾನ್ನಿಧ್ಯದಿಂದ ಸಾಧ್ಯ. ಈ ಮೂಲಕ ಭಾರತದ ವೈಶಿಷ್ಟ್ಯ ಜಗತ್ತಿಗೆ ಮಾದರಿಯಾಗುವಂತೆ ಮಾಡಬಹುದು ಎಂದರು.

‘ತಂತ್ರಜ್ಞಾನ ಶ್ರದ್ಧೆ ಕಸಿಯಲಾರದು’

ಎಸ್‌.ವ್ಯಾಸ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ರಾಮಚಂದ್ರ ಭಟ್ ಕೋಟೆಮನೆ ಮಾತನಾಡಿ, ಮಾನವನ ವಿಚಾರಶಕ್ತಿ ಮತ್ತು ನೆನಪಿನ ಶಕ್ತಿಯನ್ನು ಮೀರಿಸುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಬೆಳೆಯುತ್ತಿದೆ. ಆದರೆ ಶ್ರದ್ಧೆ ಮತ್ತು ಆತ್ಮಚಕ್ಷುವನ್ನು ಕಸಿದುಕೊಳ್ಳಲು ಅದಕ್ಕೆ ಸಾಧ್ಯವಿಲ್ಲ. ಯಂತ್ರಗಳಿಂದ ನಕಲು ಮಾಡಲು ಸಾಧ್ಯವಾಗದ ಜ್ಞಾನಪರಂಪರೆಗಳನ್ನು ಸಂರಕ್ಷಿಸುವುದೇ ಭಾರತೀಯತೆಯ ಪ್ರಮುಖ ಅಂಶ ಎಂದರು.

ಮುಂದಿನ ಸವಾಲುಗಳನ್ನು ಎದುರಿಸಲು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮಾತ್ರ ಸಾಲದು. ಮುಂದಿನ ಪೀಳಿಗೆಗೆ ಯೋಗ, ಯಾಗಾಭ್ಯಾಸ, ಧ್ಯಾನ, ಭಗವದ್ಗೀತೆ ಸೇರಿದಂತೆ ಭಾರತೀಯ ಜ್ಞಾನಪರಂಪರೆಯ ಅರಿವು ಅಗತ್ಯ ಎಂದು ಹೇಳಿದರು.

‘ಗುರು-ತಂತ್ರಜ್ಞಾನ ಸಮನ್ವಯ ಅಗತ್ಯ’

ಎಐಸಿಟಿಇ ಮಾಜಿ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ ಮಾತನಾಡಿ, ಮುಂದಿನ ಪೀಳಿಗೆಗೆ ಜ್ಞಾನ, ಪ್ರಶ್ನಿಸುವ ಆತ್ಮವಿಶ್ವಾಸ ಹಾಗೂ ಹೊಸದನ್ನು ಸೃಷ್ಟಿಸುವ ಧೈರ್ಯವನ್ನು ಗುರುಗಳು ನೀಡಬೇಕು. ಗುರು ಮತ್ತು ತಂತ್ರಜ್ಞಾನದ ಸಮನ್ವಯದಿಂದ ರೂಪುಗೊಳ್ಳುವ ಜ್ಞಾನ ಭವಿಷ್ಯವನ್ನು ರೂಪಿಸಲಿದೆ. ತಂತ್ರಜ್ಞಾನವನ್ನು ನೈತಿಕತೆಯೊಂದಿಗೆ ಬಳಸಿದರೆ ಮನುಕುಲಕ್ಕೆ ಒಳಿತಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಪ್ರೊ. ಪ್ರವೀಣ್ ಸಿ. ರಾಮಮೂರ್ತಿ ಮಾತನಾಡಿ, ಒಳ್ಳೆಯ ಸಂಗತಿಗಳು ಪುನರಾವರ್ತನೆಯಾಗಬೇಕು ಹಾಗೂ ಅವುಗಳನ್ನು ಸಂಭ್ರಮಿಸಬೇಕು ಎಂಬ ಉದ್ದೇಶದಿಂದ ಗುರುವಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಯೊಬ್ಬರಿಂದಲೂ ಕಲಿಯುವ ಅವಕಾಶವಿದ್ದು, ಎಲ್ಲರನ್ನೂ ಗೌರವಿಸಬೇಕು. ಕಲಿಕೆಯ ವೇದಿಕೆಯಾಗಿರುವ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಅದರಲ್ಲಿರುವ ದೋಷಗಳನ್ನು ಸರಿಪಡಿಸಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅದಕ್ಕೆ ಅಂಜುವ ಅಗತ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ 10 ಮಂದಿ ಗುರುಗಳನ್ನು ಸನ್ಮಾನಿಸಲಾಯಿತು. ಶಿಕ್ಷಣ ತಜ್ಞರು, ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.

Author

ANU News

Follow Me
Other Articles
Previous

MLC CT Ravi urges K’taka CM to address Chikkamagaluru roads, drinking water and Western Ghats concerns

Next

Indian knowledge tradition can offer answers to AI challenges: RSS leader Mukund CR

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Indian knowledge tradition can offer answers to AI challenges: RSS leader Mukund CR
    • ಕೃತಕ ಬುದ್ಧಿಮತ್ತೆ ಸವಾಲುಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರ: RSS ಸಹಸರಕಾರ್ಯವಾಹ ಸಿ.ಆರ್.ಮುಕುಂದ
    • MLC CT Ravi urges K’taka CM to address Chikkamagaluru roads, drinking water and Western Ghats concerns
    • ಸಿಎಂ ಚಿಕ್ಕಮಗಳೂರು ಭೇಟಿ ಸಂದರ್ಭದಲ್ಲಿ ಸಿ.ಟಿ.ರವಿ ಬಹಿರಂಗ ಪತ್ರ
    • Modi is a ‘blessing from God’ for India, says CT Ravi
    Copyright 2026 — ANU News. All rights reserved. Blogsy WordPress Theme