ಅಹಮದಾಬಾದ್: ದೇಶದ ಮೊದಲ ಎಲ್‌ಎನ್‌ಜಿ (LNG) ಚಾಲಿತ ರೈಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಸಬರಮತಿ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಿದರು. ಇದೇ ವೇಳೆ ₹1,472 ಕೋಟಿ ಮೌಲ್ಯದ ವಿವಿಧ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
₹700 ಕೋಟಿ ವೆಚ್ಚದ WAG-12 ಲೋಕೋಮೋಟಿವ್ ನಿರ್ವಹಣಾ ಶೆಡ್ ಉದ್ಘಾಟಿಸಿದ ಶಾ, ಸಬರಮತಿ–ಕಲೋಲ್–ಸಬರಮತಿ ಮಾರ್ಗದಲ್ಲಿ ‘ಕವಚ್’ ರೈಲು ಸುರಕ್ಷತಾ ವ್ಯವಸ್ಥೆಯನ್ನೂ ಜಾರಿಗೆ ತಂದರು. ಅಹಮದಾಬಾದ್–ಪಾಲನ್‌ಪುರ, ಅಹಮದಾಬಾದ್–ಸಮಖಿಯಾಲಿ ಮಾರ್ಗಗಳಿಗೆ ಕವಚ್ ವಿಸ್ತರಣೆ ಹಾಗೂ ಸಬರಮತಿ–ಸರ್ಖೇಜ್ ರೈಲು ಮಾರ್ಗದ ದ್ವಿಗುಣಗೊಳಿಸುವ ಕಾಮಗಾರಿಗೂ ಚಾಲನೆ ನೀಡಲಾಯಿತು.
ಎಲ್‌ಎನ್‌ಜಿ ಚಾಲಿತ ರೈಲು ರೈಲ್ವೆ ಕಾರ್ಯಾಚರಣೆಗಳಿಂದ ಉಂಟಾಗುವ ಪರಿಸರ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಶಾ ಹೇಳಿದರು.
12,000 ಅಶ್ವಶಕ್ತಿ ಸಾಮರ್ಥ್ಯದ WAG-12 ಲೋಕೋಮೋಟಿವ್ ಸುಮಾರು 600 ಟ್ರಕ್‌ಗಳಿಗೆ ಸಮಾನವಾದ ಸರಕನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಭಾರೀ ಸರಕು ಸಾಗಣೆಯಲ್ಲಿ ಸಾಮರ್ಥ್ಯ ಹೆಚ್ಚಲಿದೆ ಎಂದರು.
ಮುಂಬೈ–ವಡೋದರಾ ನಡುವೆ ಡಬಲ್-ಸ್ಟಾಕ್ ಕಂಟೈನರ್ ರೈಲಿನ ಯಶಸ್ವಿ ಪ್ರಾಯೋಗಿಕ ಸಂಚಾರವನ್ನೂ ಅವರು ಉಲ್ಲೇಖಿಸಿದರು.

2015-16ರಲ್ಲಿ 293 ಕೋಟಿ ಲೀಟರ್ ಇದ್ದ ರೈಲ್ವೆಯ ಡೀಸೆಲ್ ಬಳಕೆ 2024-25ರಲ್ಲಿ 108 ಕೋಟಿ ಲೀಟರ್‌ಗೆ ಇಳಿಕೆಯಾಗಿದೆ ಎಂದು ಶಾ ತಿಳಿಸಿದರು. ಹೆಚ್ಚಿದ ವಿದ್ಯುದ್ದೀಕರಣ ಮತ್ತು ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಈ ಬದಲಾವಣೆ ಸಾಧ್ಯವಾಗಿದೆ ಎಂದರು.
2014ಕ್ಕೂ ಮೊದಲು ಶೇ.30ರಷ್ಟಿದ್ದ ರೈಲ್ವೆ ವಿದ್ಯುದ್ದೀಕರಣ ಇದೀಗ ಶೇ.99.6ಕ್ಕೆ ತಲುಪಿದೆ. ಉಳಿದ ಭಾಗದ ವಿದ್ಯುದ್ದೀಕರಣವೂ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ರೈಲ್ವೆ ಆಧುನೀಕರಣದ ಭಾಗವಾಗಿ ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ದ ಮೂಲಕ ರೈಲು ಎಂಜಿನ್‌ಗಳು ಹಾಗೂ ಉಪಕರಣಗಳ ದೇಶೀಯ ಉತ್ಪಾದನೆ ಹೆಚ್ಚಿಸಲಾಗುತ್ತಿದೆ ಎಂದರು.
ಗುಜರಾತ್‌ಗೆ ರೈಲ್ವೆ ಅನುದಾನದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಶಾ ಹೇಳಿದರು. 2009-14ರ ಅವಧಿಯಲ್ಲಿ ವಾರ್ಷಿಕ ಸರಾಸರಿ ₹589 ಕೋಟಿಯಷ್ಟಿದ್ದ ಅನುದಾನವು 2026-27ರಲ್ಲಿ ₹17,366 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದರು.
ಸಬರಮತಿ ವಿಭಾಗದಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳು ಪ್ರಯಾಣಿಕರ ಸೌಲಭ್ಯ, ರೈಲು ಸುರಕ್ಷತೆ, ಸರಕು ಸಾಗಣೆ ಸಾಮರ್ಥ್ಯ ಮತ್ತು ಪರಿಸರ ಸುಸ್ಥಿರತೆಗೆ ಒತ್ತು ನೀಡಲಿವೆ ಎಂದರು.
ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.