‘ಡಿಜಿಟಲ್ ಡಿಟಾಕ್ಸ್ 2.0’: 15 ಇಂಡಿಗೋ ವಿಮಾನಗಳಲ್ಲಿ ಕೈಬರಹದ ದೀಪಾವಳಿ ಶುಭಾಶಯ
ನವದೆಹಲಿ: ಡಿಜಿಟಲ್ ಜಗತ್ತಿನಲ್ಲಿ ಕಳೆದುಹೋಗುತ್ತಿರುವ ಕೈಬರಹದ ಪತ್ರಗಳ ಸಂಪ್ರದಾಯವನ್ನು ಮತ್ತೆ ಪರಿಚಯಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್ ಮತ್ತು ಇಂಡಿಗೋ ಜಂಟಿಯಾಗಿ ‘ಡಿಜಿಟಲ್ ಡಿಟಾಕ್ಸ್ 2.0’ ಅಭಿಯಾನ ಆರಂಭಿಸಿವೆ. ವಿಮಾನ ಪ್ರಯಾಣದ ವೇಳೆ ಮೊಬೈಲ್ ಪರದೆಗಳಿಂದ ವಿರಾಮ ಪಡೆದು ಕುಟುಂಬ ಮತ್ತು ಸ್ನೇಹಿತರಿಗೆ ಕೈಬರಹದ ದೀಪಾವಳಿ ಶುಭಾಶಯ ಕಳುಹಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ದೆಹಲಿ, ಮುಂಬೈ, ಕೋಲ್ಕತ್ತಾ, ಪುಣೆ, ಗೋವಾ, ಜೈಪುರ, ಅಹಮದಾಬಾದ್, ಚಂಡೀಗಢ, ರಾಂಚಿ, ಬಾಗ್ಡೋಗ್ರಾ ಮತ್ತು ವಾರಣಾಸಿ ಸೇರಿದಂತೆ 11 ನಗರಗಳನ್ನು ಸಂಪರ್ಕಿಸುವ 15 ಇಂಡಿಗೋ ವಿಮಾನಗಳಲ್ಲಿ ಈ ಅಭಿಯಾನ ನಡೆಯಿತು.
ಪ್ರಯಾಣಿಕರಿಗೆ ದೀಪಾವಳಿ ವಿನ್ಯಾಸದ ಸ್ಟಿಕ್ಕರ್‌ಗಳಿರುವ ಪೋಸ್ಟ್‌ಕಾರ್ಡ್‌ಗಳು, ಶುಭಾಶಯ ಪತ್ರಗಳು ಮತ್ತು ಸ್ವತಃ ವಿನ್ಯಾಸಗೊಳಿಸಬಹುದಾದ ಪೋಸ್ಟ್‌ಕಾರ್ಡ್‌ಗಳನ್ನು ಒಳಗೊಂಡ ವಿಶೇಷ ಕಿಟ್‌ಗಳನ್ನು ವಿತರಿಸಲಾಯಿತು. ಈ ಮೂಲಕ ಡಿಜಿಟಲ್ ಸಂದೇಶಗಳ ಬದಲಿಗೆ ವೈಯಕ್ತಿಕ ಸ್ಪರ್ಶದ ಕೈಬರಹದ ಶುಭಾಶಯಗಳನ್ನು ಪ್ರೋತ್ಸಾಹಿಸಲಾಯಿತು.

ಕೇಂದ್ರ ಸಂವಹನ ಸಚಿವಾಲಯದ ಅಧೀನದಲ್ಲಿರುವ ಅಂಚೆ ಇಲಾಖೆ, ಇಂಡಿಗೋ ಸಹಯೋಗದಲ್ಲಿ ಈ ಅಭಿಯಾನವನ್ನು ಆಯೋಜಿಸಿದೆ. ಮೊದಲ ಆವೃತ್ತಿಗೆ ದೊರೆತ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಎರಡನೇ ಆವೃತ್ತಿಯನ್ನು ಹಮ್ಮಿಕೊಳ್ಳಲಾಗಿದೆ.
ಅನೇಕ ಪ್ರಯಾಣಿಕರು ಈ ಉಪಕ್ರಮವನ್ನು ಸ್ವಾಗತಿಸಿದ್ದು, ವಿಮಾನದಲ್ಲೇ ಪೋಸ್ಟ್‌ಕಾರ್ಡ್ ಬರೆಯುವ ಅನುಭವ ಸ್ಮರಣೀಯವಾಗಿತ್ತು ಎಂದು ತಿಳಿಸಿದ್ದಾರೆ. ಕೆಲವರಿಗೆ ಇದು ಮೊದಲ ಬಾರಿಗೆ ಪೋಸ್ಟ್‌ಕಾರ್ಡ್ ಕಳುಹಿಸಿದ ಅನುಭವವಾಗಿದ್ದರೆ, ಇನ್ನು ಕೆಲವರು ಕೈಬರಹದ ಶುಭಾಶಯಗಳು ಡಿಜಿಟಲ್ ಸಂದೇಶಗಳಿಗಿಂತ ಹೆಚ್ಚು ಆತ್ಮೀಯವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಂಪ್ರದಾಯಿಕ ಪತ್ರ ಬರೆಯುವ ಅಭ್ಯಾಸವನ್ನು ಉತ್ತೇಜಿಸಿ, ಜನರ ನಡುವಿನ ವೈಯಕ್ತಿಕ ಸಂಪರ್ಕವನ್ನು ಬಲಪಡಿಸುವುದು ಅಭಿಯಾನದ ಉದ್ದೇಶ ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ.