ಭಾರತದ ಇಂಟರ್ನೆಟ್ ಚಂದಾದಾರರ ಸಂಖ್ಯೆ 109 ಕೋಟಿ ದಾಟಿದೆ; ಟೆಲಿಕಾಂ ಆದಾಯ ಶೇ.10.4ರಷ್ಟು ಏರಿಕೆ
ನವದೆಹಲಿ: ದೇಶದ ಇಂಟರ್ನೆಟ್ ಬಳಕೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, 2026ರ ಮಾರ್ಚ್ ಅಂತ್ಯದ ವೇಳೆಗೆ ಭಾರತದ ಒಟ್ಟು ಇಂಟರ್ನೆಟ್ ಚಂದಾದಾರರ ಸಂಖ್ಯೆ 109 ಕೋಟಿ ದಾಟಿದೆ. ಟೆಲಿಕಾಂ ವಲಯದ ಆದಾಯದಲ್ಲೂ ಗಮನಾರ್ಹ ಏರಿಕೆ ದಾಖಲಾಗಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI)ದ 2025-26ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿ ತಿಳಿಸಿದೆ.
ವರದಿ ಪ್ರಕಾರ, ಮಾರ್ಚ್ 2025ರಲ್ಲಿ 96.91 ಕೋಟಿಯಷ್ಟಿದ್ದ ಒಟ್ಟು ಇಂಟರ್ನೆಟ್ ಚಂದಾದಾರರ ಸಂಖ್ಯೆ ಮಾರ್ಚ್ 2026ರ ವೇಳೆಗೆ 109.28 ಕೋಟಿಗೆ ಏರಿಕೆಯಾಗಿದೆ. ಇದು ಶೇ.12.76ರಷ್ಟು ವಾರ್ಷಿಕ ಬೆಳವಣಿಗೆಯಾಗಿದೆ. ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆ ಶೇ.12.90ರಷ್ಟು ಹೆಚ್ಚಾಗಿ 106.59 ಕೋಟಿಗೆ ತಲುಪಿದ್ದರೆ, ನ್ಯಾರೋಬ್ಯಾಂಡ್ ಚಂದಾದಾರರು ಶೇ.7.72ರಷ್ಟು ಏರಿಕೆಯಾಗಿ 2.69 ಕೋಟಿಗೆ ತಲುಪಿದ್ದಾರೆ.
ವೈರ್‌ಲೆಸ್ ಡೇಟಾ ಬಳಕೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ವೈರ್‌ಲೆಸ್ ಡೇಟಾ ಚಂದಾದಾರರ ಸಂಖ್ಯೆ ಶೇ.9.29ರಷ್ಟು ಹೆಚ್ಚಾಗಿ 102.68 ಕೋಟಿಗೆ ತಲುಪಿದೆ. 2025-26ರಲ್ಲಿ ಒಟ್ಟು ವೈರ್‌ಲೆಸ್ ಡೇಟಾ ಬಳಕೆ ಶೇ.24.74ರಷ್ಟು ಏರಿಕೆಯಾಗಿ 2,85,376 ಪೆಟಾಬೈಟ್‌ಗೆ ತಲುಪಿದೆ. ಪ್ರತಿ ಚಂದಾದಾರರ ಸರಾಸರಿ ಮಾಸಿಕ ಡೇಟಾ ಬಳಕೆಯೂ ಶೇ.18.49ರಷ್ಟು ಹೆಚ್ಚಾಗಿ 25.51 ಜಿಬಿಗೆ ಏರಿಕೆಯಾಗಿದೆ.

ದೇಶದ ಒಟ್ಟು ದೂರವಾಣಿ ಚಂದಾದಾರರ ಸಂಖ್ಯೆ ಶೇ.10.81ರಷ್ಟು ಏರಿಕೆಯಾಗಿ 133 ಕೋಟಿಗೆ ತಲುಪಿದ್ದು, ಒಟ್ಟಾರೆ ಟೆಲಿ-ಸಾಂದ್ರತೆ ಶೇ.93.26ಕ್ಕೆ ಏರಿಕೆಯಾಗಿದೆ. ವೈರ್‌ಲೆಸ್ ಚಂದಾದಾರರ ಸಂಖ್ಯೆ ಶೇ.10.19ರಷ್ಟು ಹೆಚ್ಚಾಗಿ 128 ಕೋಟಿಗೆ ತಲುಪಿದ್ದರೆ, ವೈರ್‌ಲೈನ್ ಸಂಪರ್ಕಗಳ ಸಂಖ್ಯೆ ಶೇ.30.25ರಷ್ಟು ಏರಿಕೆಯಾಗಿ 4.83 ಕೋಟಿಗೆ ತಲುಪಿದೆ.
ಟೆಲಿಕಾಂ ವಲಯದ ಒಟ್ಟು ಆದಾಯ (ಗ್ರಾಸ್ ರೆವಿನ್ಯೂ) ಶೇ.8.59ರಷ್ಟು ಹೆಚ್ಚಾಗಿ ₹4.04 ಲಕ್ಷ ಕೋಟಿಗೆ ತಲುಪಿದೆ. ಹೊಂದಾಣಿಕೆ ಮಾಡಿದ ಒಟ್ಟು ಆದಾಯ (AGR) ಶೇ.10.44ರಷ್ಟು ಏರಿಕೆಯಾಗಿ ₹3.35 ಲಕ್ಷ ಕೋಟಿಯಾಗಿದೆ. ಪ್ರತಿ ವೈರ್‌ಲೆಸ್ ಬಳಕೆದಾರರಿಂದ ದೊರೆಯುವ ಸರಾಸರಿ ಮಾಸಿಕ ಆದಾಯವೂ ಶೇ.3.59ರಷ್ಟು ಹೆಚ್ಚಾಗಿ ₹180.73ಕ್ಕೆ ತಲುಪಿದೆ.
ಇದೇ ವೇಳೆ ಪೇ-ಡಿಟಿಎಚ್ ಚಂದಾದಾರರ ಸಂಖ್ಯೆ ಇಳಿಕೆಯಾಗಿದ್ದು, ಮಾರ್ಚ್ 2025ರ 5.692 ಕೋಟಿಯಿಂದ ಮಾರ್ಚ್ 2026ರ ವೇಳೆಗೆ 4.905 ಕೋಟಿಗೆ ಕುಸಿದಿದೆ. ಮತ್ತೊಂದೆಡೆ, ಖಾಸಗಿ ಎಫ್‌ಎಂ ರೇಡಿಯೋ ಚಾನೆಲ್‌ಗಳ ಸಂಖ್ಯೆ 120 ನಗರಗಳಲ್ಲಿ 390ಕ್ಕೆ ಏರಿಕೆಯಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಸಮುದಾಯ ರೇಡಿಯೋ ಕೇಂದ್ರಗಳ ಸಂಖ್ಯೆ 564ಕ್ಕೆ ತಲುಪಿದೆ.
ಸೇವಾ ಪೂರೈಕೆದಾರರು ಸಲ್ಲಿಸಿರುವ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಿರುವ ಈ ವರದಿಯು ದೇಶದ ದೂರಸಂಪರ್ಕ, ಕೇಬಲ್ ಟಿವಿ, ಡಿಟಿಎಚ್ ಹಾಗೂ ರೇಡಿಯೋ ಪ್ರಸಾರ ಸೇವೆಗಳ ಸ್ಥಿತಿಗತಿಯ ಸಮಗ್ರ ಚಿತ್ರಣವನ್ನು ಒದಗಿಸುತ್ತದೆ ಎಂದು ಟ್ರಾಯ್ ತಿಳಿಸಿದೆ.