ಪರಿಷತ್ ಚುನಾವಣೆ: ಶಿಕ್ಷಕರಿಗೆ ಬಾರ್ಕೋಡ್ ಕೂಪನ್ ಹಂಚಿಕೆ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಜೆಡಿಎಸ್ ಆರೋಪ
ಬೆಂಗಳೂರು: ಶಿಕ್ಷಕರಿಗೆ ದಸರಾ ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಬಾರ್ಕೋಡ್ ಹೊಂದಿರುವ ಕೂಪನ್ಗಳು ಹಾಗೂ ಗ್ಯಾರಂಟಿ ಕಾರ್ಡ್ಗಳನ್ನು ಹಂಚುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಚುನಾವಣಾ ಅಕ್ರಮಕ್ಕೆ ಮುಂದಾಗಿದ್ದಾರೆ ಎಂದು ಜಾತ್ಯತೀತ ಜನತಾದಳ (ಜೆಡಿಎಸ್) ಆರೋಪಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಶಿಕ್ಷಕರಿಗೆ ಆಮಿಷವೊಡ್ಡಿ ವಾಮಮಾರ್ಗದಲ್ಲಿ ಚುನಾವಣೆ ನಡೆಸಲು ಯತ್ನಿಸುತ್ತಿರುವ ಪುಟ್ಟಣ್ಣ ಅವರ ನಡೆ ಖಂಡನೀಯ ಎಂದು ಹೇಳಿದೆ. ಬಾರ್ಕೋಡ್ ಹೊಂದಿರುವ ಕೂಪನ್ಗಳನ್ನು ಹಂಚುವ ಮೂಲಕ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುವ ಪಕ್ಷ, ಭವಿಷ್ಯ ರೂಪಿಸುವ ಶಿಕ್ಷಕರ ಮತಗಳನ್ನು ಖರೀದಿಸಲು ಯತ್ನಿಸುತ್ತಿರುವುದು ಕಾಂಗ್ರೆಸ್ನ ಭ್ರಷ್ಟ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಿಸಿದೆ.
ಈ ಆರೋಪದ ಹಿನ್ನೆಲೆಯಲ್ಲಿ ಎನ್ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಹಾಗೂ ಮೈತ್ರಿಕೂಟದ ಮುಖಂಡರು ಚುನಾವಣಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ. ಪ್ರಕರಣದ ಕುರಿತು ಚುನಾವಣಾ ಆಯೋಗ ತಕ್ಷಣ ಸಮಗ್ರ ತನಿಖೆ ನಡೆಸಬೇಕು. ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ ಕೈಗೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಅನರ್ಹಗೊಳಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.