ಡಿಸೆಂಬರ್ ಅಂತ್ಯದೊಳಗೆ 800 ಆಂಬುಲೆನ್ಸ್‌ಗಳ ಸೇವೆ: ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಸೌಲಭ್ಯ, ಮಹಿಳೆಯರಿಗೆ ಪ್ರತ್ಯೇಕ ಆರೋಗ್ಯ ನೀತಿ ಜಾರಿ
ಬಳ್ಳಾರಿ: ರಾಜ್ಯದ ಜನತೆಗೆ ಗುಣಮಟ್ಟದ ಮತ್ತು ಸಮಯಕ್ಕೆ ಸರಿಯಾಗಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಪ್ರವಾಸದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇರ ನೇಮಕಾತಿಗೆ ಅವಕಾಶ ನೀಡಿದ ಬಳಿಕ ರಾಜ್ಯದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 200ಕ್ಕೂ ಹೆಚ್ಚು ವೈದ್ಯರು ಸೇರ್ಪಡೆಯಾಗಿದ್ದಾರೆ. ಜಿಲ್ಲೆಗಳ ಅಗತ್ಯಕ್ಕೆ ಅನುಗುಣವಾಗಿ ಲ್ಯಾಬ್ ಟೆಕ್ನಿಷಿಯನ್ ಮತ್ತು ಫಾರ್ಮಸಿಸ್ಟ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ ಎಂದರು.
ಹಳ್ಳಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಅಲ್ಲಿಂದ ತಾಲೂಕು ಆಸ್ಪತ್ರೆಗೆ 20ರಿಂದ 25 ನಿಮಿಷಗಳಲ್ಲಿ ರೋಗಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. 350 ಹೊಸ ಆಂಬುಲೆನ್ಸ್‌ಗಳಿಗೆ ಅನುಮೋದನೆ ದೊರೆತಿದ್ದು, ಈಗಿರುವ 450 ವಾಹನಗಳೊಂದಿಗೆ ಒಟ್ಟು 800 ಆಂಬುಲೆನ್ಸ್‌ಗಳು ಸೇವೆ ನೀಡಲಿವೆ. ಆಂಬುಲೆನ್ಸ್ ವಿಳಂಬವಾದರೆ ನಿರ್ವಹಣಾ ಸಂಸ್ಥೆಗೆ ₹3,000 ದಂಡ ವಿಧಿಸುವ ಷರತ್ತನ್ನೂ ವಿಧಿಸಲಾಗಿದೆ ಎಂದು ತಿಳಿಸಿದರು.

100 ದಿನಗಳ ಕಾರ್ಯಕ್ರಮದಡಿ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು ನೇಮಿಸುವುದರ ಜೊತೆಗೆ ಐದು ಐಸಿಯು ಹಾಸಿಗೆಗಳನ್ನು ಸ್ಥಾಪಿಸಲಾಗುವುದು. ತುರ್ತು ಪ್ರಕರಣಗಳಿಗೂ ಜಿಲ್ಲಾ ಆಸ್ಪತ್ರೆಗಳಿಗೆ ತೆರಳುವ ಅನಿವಾರ್ಯತೆ ತಪ್ಪಿಸಿ, ತಾಲೂಕು ಮಟ್ಟದಲ್ಲೇ ಚಿಕಿತ್ಸೆ ಒದಗಿಸುವುದು ಇದರ ಉದ್ದೇಶ ಎಂದರು.
ರಾಜ್ಯದಲ್ಲಿ ಪ್ರತ್ಯೇಕ ಮಹಿಳಾ ಆರೋಗ್ಯ ನೀತಿ ಜಾರಿಗೆ ತರಲಾಗುತ್ತಿದೆ. ಹುಟ್ಟಿನಿಂದ ವೃದ್ಧಾಪ್ಯದವರೆಗೆ ಮಹಿಳೆಯರಿಗೆ ಅಗತ್ಯವಿರುವ ರೋಗ ತಡೆ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲು ಪ್ರತ್ಯೇಕ ವಿಭಾಗ ರಚಿಸಿ, ಉಪನಿರ್ದೇಶಕರನ್ನು ನೇಮಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಚಿತ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದರು.