ಕುಲ್ಗಾಮ್ ಎನ್ಕೌಂಟರ್ನಲ್ಲಿ ಲಷ್ಕರ್ ಉಗ್ರ ಲತೀಫ್ ಭಟ್ ಹತ್ಯೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಜಂಗಲ್ಪೋರಾ/ಲಾರೂ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಉಗ್ರ ಲತೀಫ್ ಭಟ್ ಹತನಾಗಿದ್ದಾನೆ.
ನವೆಂಬರ್ 11ರಂದು ಸಿಆರ್ಪಿಎಫ್ ಸಿಬ್ಬಂದಿ ಮೇಲಿನ ದಾಳಿಯಲ್ಲಿ ಬದುಕುಳಿದಿದ್ದ ಏಕೈಕ ಉಗ್ರ ಈತ ಎಂದು ವರದಿಯಾಗಿದೆ. ಬುಧವಾರ ಮುಂಜಾನೆ 2.45ರ ಸುಮಾರಿಗೆ ಮಸೀದಿಯೊಳಗಿಂದ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ಬಳಿಕ ಎನ್ಕೌಂಟರ್ ಆರಂಭವಾಯಿತು.

ಶರಣಾಗುವಂತೆ ಹಲವು ಬಾರಿ ಮನವಿ ಮಾಡಿದರೂ ಆತ ಒಪ್ಪಿರಲಿಲ್ಲ. ವಿಡಿಯೋ ಕಾಲ್ ಮೂಲಕವೂ ಮನವೊಲಿಸಲು ಪ್ರಯತ್ನಿಸಲಾಗಿತ್ತು ಎಂದು ಎಸ್ಎಸ್ಪಿ ಅನಾಯತ್ ಅಲಿ ತಿಳಿಸಿದ್ದಾರೆ. ಮಸೀದಿಗೆ ಹಾನಿಯಾಗದಂತೆ ಭದ್ರತಾ ಪಡೆಗಳು ಸಂಯಮ ವಹಿಸಿದ್ದವು. ಸುಮಾರು ಒಂಬತ್ತು ಗಂಟೆಗಳ ಕಾರ್ಯಾಚರಣೆಯ ಬಳಿಕ ಲತೀಫ್ನನ್ನು ಹತ್ಯೆ ಮಾಡಲಾಗಿದ್ದು, ಮೃತದೇಹ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 16ರಂದು ಲಾರೂ ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಆತನ ಸಹಚರ ಉಮರ್ ನಾಸಿರ್ ಹತನಾಗಿದ್ದರೆ, ಲತೀಫ್ ತಪ್ಪಿಸಿಕೊಂಡಿದ್ದ. ಬಳಿಕ ಆತನಿಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು.