ಮಹಾರಾಷ್ಟ್ರದಲ್ಲಿ ಬೃಹತ್ ವನ್ಯಜೀವಿ ಕಳ್ಳಸಾಗಣೆ ಜಾಲ ಭೇದಿಸಿದ DRI; 2 ಲೀಟರ್ ಶಂಕಿತ ಹಾವಿನ ವಿಷ, ಬೆಕ್ಕಿನ ಚರ್ಮ ವಶ
ಮುಂಬೈ: ಮಹಾರಾಷ್ಟ್ರದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ವನ್ಯಜೀವಿ ಕಳ್ಳಸಾಗಣೆ ಜಾಲಗಳನ್ನು ಭೇದಿಸಿದೆ. ಸುಮಾರು ಎರಡು ಲೀಟರ್ ಶಂಕಿತ ನಾಗರಹಾವಿನ ವಿಷ, ಹುಲಿ ಮತ್ತು ಚಿರತೆಗಳ ಮೂರು ಚರ್ಮ ಹಾಗೂ ಏರ್ ರೈಫಲ್ ವಶಪಡಿಸಿಕೊಂಡು ಆರು ಮಂದಿಯನ್ನು ಬಂಧಿಸಿದೆ.
ನವೆಂಬರ್ 25ರಂದು ಪುಣೆ ಸಮೀಪ ಇಂದ್ರಾಯಣಿ ನದಿ ಬಳಿ ನಡೆದ ಮೊದಲ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಅವರಿಂದ ಶಂಕಿತ ನಾಗರಹಾವಿನ ವಿಷವಿದ್ದ ಎರಡು ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಷದ ಸಂಪರ್ಕಕ್ಕೆ ಬಂದ ಡಿಆರ್‌ಐ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಆರೋಪಿಗಳು ಮತ್ತು ವಸ್ತುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ನವೆಂಬರ್ 26ರಂದು ಮತ್ತೊಂದು ಕಾರ್ಯಾಚರಣೆಯಲ್ಲಿ ಪನ್ವೇಲ್‌ನಲ್ಲಿ ಶಂಕಿತನನ್ನು ತಡೆದು ಹುಲಿ ಮತ್ತು ಚಿರತೆಯ ಚರ್ಮಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ನವಿ ಮುಂಬೈನ ವಸತಿ ಸಂಕೀರ್ಣದಲ್ಲಿ ಇಬ್ಬರು ಮಹಿಳೆಯರಿಂದ ಮತ್ತೊಂದು ಚಿರತೆ ಚರ್ಮ ಹಾಗೂ .177 ಕ್ಯಾಲಿಬರ್ ಏರ್ ರೈಫಲ್ ವಶಪಡಿಸಿಕೊಳ್ಳಲಾಗಿದೆ. ಚಿರತೆಯ ಚರ್ಮದಲ್ಲಿ ಗುಂಡೇಟಿನ ಗಾಯವೂ ಪತ್ತೆಯಾಗಿದೆ ಎಂದು ವರದಿಯಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ವೇಳಾಪಟ್ಟಿ-I ಅಡಿಯಲ್ಲಿ ನಾಗರಹಾವು, ಹುಲಿ ಮತ್ತು ಚಿರತೆಗಳಿಗೆ ರಕ್ಷಣೆ ನೀಡಲಾಗಿದೆ. ಇವುಗಳ ಬೇಟೆ, ಅನಧಿಕೃತ ಸ್ವಾಧೀನ ಮತ್ತು ವ್ಯಾಪಾರ ನಿಷಿದ್ಧವಾಗಿದೆ ಎಂದು ಡಿಆರ್‌ಐ ತಿಳಿಸಿದೆ.