ಮಹಾರಾಷ್ಟ್ರದಲ್ಲಿ ಬರದ ಭೀಕರತೆ; 19 ಜಲಾಶಯಗಳು ಸಂಪೂರ್ಣ ಖಾಲಿ
ಮುಂಬೈ: ಮಹಾರಾಷ್ಟ್ರದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ಮರಾಠವಾಡದ 19 ಜಲಾಶಯಗಳು ಸಂಪೂರ್ಣ ಬತ್ತಿಹೋಗಿವೆ. ಕಳೆದ ಒಂದು ತಿಂಗಳಲ್ಲಿ ನೀರಿನ ಟ್ಯಾಂಕರ್‌ಗಳ ಬೇಡಿಕೆ ದುಪ್ಪಟ್ಟಾಗಿದೆ. ರಾಜ್ಯದ 310 ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ.
ರಾಜ್ಯದ 11 ಜಿಲ್ಲೆಗಳ 1,102 ಗ್ರಾಮಗಳು ಮತ್ತು 3,801 ಜನವಸತಿ ಪ್ರದೇಶಗಳಿಗೆ 1,323 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮರಾಠವಾಡದಲ್ಲಿ 668 ಹಾಗೂ ಬೀಡ್ ಜಿಲ್ಲೆಯಲ್ಲಿ 326 ಟ್ಯಾಂಕರ್‌ಗಳು ಕಾರ್ಯನಿರ್ವಹಿಸುತ್ತಿವೆ.

ರಾಜ್ಯದ ಜಲಾಶಯಗಳ ಒಟ್ಟು ನೀರಿನ ಸಂಗ್ರಹ ಶೇ.61.88ಕ್ಕೆ ಕುಸಿದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.90.26ರಷ್ಟಿತ್ತು. ಮರಾಠವಾಡದಲ್ಲಿ ಸಂಗ್ರಹ ಶೇ.33.79ಕ್ಕೆ ಇಳಿದಿದೆ. ಹೆಚ್ಚುವರಿ 13 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಕುರಿತು ಸಮೀಕ್ಷೆ ನಡೆಯಲಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಯೋಜನಾ ಇಲಾಖೆ ಕುಡಿಯುವ ನೀರಿನ ಪೂರೈಕೆ, ಪೈಪ್‌ಲೈನ್ ದುರಸ್ತಿ, ನೀರಿನ ಸಂರಕ್ಷಣೆ ಹಾಗೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಬರಪೀಡಿತ ಪ್ರದೇಶಗಳಲ್ಲಿ ಅಗತ್ಯವಲ್ಲದ, ಹೆಚ್ಚು ನೀರು ಬಳಸುವ ಹೊಸ ಕಟ್ಟಡ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮಾರ್ಗಸೂಚಿ ಹೊರಡಿಸಲಾಗಿದೆ.