Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಗರ್ಭಪಾತಾನಂತರದ ತಾಯಿ ಮರಣ ಶೂನ್ಯಕ್ಕೆ: ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ರಾಜ್ಯಮಟ್ಟದ ಪ್ರಶಸ್ತಿ

By ANU News
November 1, 2026 2 Min Read
Comments Off on ಗರ್ಭಪಾತಾನಂತರದ ತಾಯಿ ಮರಣ ಶೂನ್ಯಕ್ಕೆ: ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ರಾಜ್ಯಮಟ್ಟದ ಪ್ರಶಸ್ತಿ

ಮಂಗಳೂರು: ಗುಣಮಟ್ಟದ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆ ಒದಗಿಸುತ್ತಿರುವ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ರಾಜ್ಯಮಟ್ಟದ ಅತ್ಯುತ್ತಮ ಜಿಲ್ಲಾ ಆಸ್ಪತ್ರೆ ಪ್ರಶಸ್ತಿಗೆ ಆಯ್ಕೆಯಾಗಿದೆ. 2025-26ನೇ ಸಾಲಿನಲ್ಲಿ ಕಾನೂನುಬದ್ಧ ಗರ್ಭಪಾತ ಮತ್ತು ನಂತರದ ಆರೈಕೆಯಲ್ಲಿ ಶೂನ್ಯ ತಾಯಿ ಮರಣ ಪ್ರಮಾಣ ದಾಖಲಿಸಿರುವ ಸಾಧನೆಗೆ ಈ ಗೌರವ ಲಭಿಸಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಪಾಸ್ ಫೌಂಡೇಶನ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಲೇಡಿಗೋಷನ್ ಆಸ್ಪತ್ರೆ ರಾಜ್ಯದ ಜಿಲ್ಲಾಸ್ಪತ್ರೆಗಳ ಪೈಕಿ ಮೊದಲ ಸ್ಥಾನ ಪಡೆದಿದೆ. 2025-26ನೇ ಸಾಲಿನಲ್ಲಿ ಆಸ್ಪತ್ರೆಯು ಒಟ್ಟು 304 ಗರ್ಭಪಾತ ಪ್ರಕರಣಗಳನ್ನು ನಿರ್ವಹಿಸಿದ್ದು, ಎಲ್ಲ ಪ್ರಕರಣಗಳಲ್ಲೂ ಗುಣಮಟ್ಟದ ಸಮಗ್ರ ಗರ್ಭಪಾತ ಆರೈಕೆ ಕಾರ್ಯಕ್ರಮದ ನಿಯಮಗಳನ್ನು ಪಾಲಿಸಿದೆ.

304 ಪ್ರಕರಣಗಳ ನಿರ್ವಹಣೆ

ಆಸ್ಪತ್ರೆಯ ಅಂಕಿಅಂಶಗಳ ಪ್ರಕಾರ, ಒಂಬತ್ತು ವಾರಗಳೊಳಗಿನ 191, 10ರಿಂದ 12 ವಾರಗಳ ಅವಧಿಯ 31, 12ರಿಂದ 20 ವಾರಗಳ ಅವಧಿಯ 52, 20ರಿಂದ 24 ವಾರಗಳ ಅವಧಿಯ 25 ಹಾಗೂ 24 ವಾರಗಳ ನಂತರದ ಐದು ಪ್ರಕರಣಗಳನ್ನು ನಿರ್ವಹಿಸಲಾಗಿದೆ. ಅಲ್ಲದೆ, ಶೇ.95ರಷ್ಟು ಫಲಾನುಭವಿಗಳಿಗೆ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿ, ಅವುಗಳ ಅನುಸರಣೆಗೆ ಕ್ರಮ ಕೈಗೊಳ್ಳಲಾಗಿದೆ.

  • 9 ವಾರಗಳ ಮೊದಲ ಗರ್ಭಪಾತ -191
  • 10 ರಿಂದ 12ವಾರಗಳು: 31
  • 12 ರಿಂದ 20 ವಾರಗಳು: 52
  • 20 ರಿಂದ 24 ವಾರಗಳು: 25
  • 24 ವಾರಗಳ ನಂತರ.: 5
  • ಒಟ್ಟು: 304

ವಿನೂತನ ಆರೋಗ್ಯ ಸೇವೆಗಳ ಕೊಡುಗೆ

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು ಈ ಸಾಧನೆಗೆ ಕಾರಣರಾದ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ, ಅರಿವಳಿಕೆ, ರೇಡಿಯೋಡಯಾಗ್ನೋಸಿಸ್ ಹಾಗೂ ನವಜಾತ ಶಿಶು ವಿಭಾಗಗಳ ತಜ್ಞ ವೈದ್ಯರನ್ನು ಅಭಿನಂದಿಸಿದ್ದಾರೆ. ಶುಶ್ರೂಷಕ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ ಮತ್ತು ತಾಂತ್ರಿಕ ವರ್ಗದವರ ಸೇವೆಯನ್ನೂ ಶ್ಲಾಘಿಸಿದ್ದಾರೆ.

ಆಸ್ಪತ್ರೆಯಲ್ಲಿ ಜಾರಿಗೊಳಿಸಿರುವ ವಾಟ್ಸ್‌ಆ್ಯಪ್ ಹೈರಿಸ್ಕ್ ಪ್ರೆಗ್ನೆನ್ಸಿ ಟ್ರ್ಯಾಕಿಂಗ್ ವ್ಯವಸ್ಥೆ, ಪ್ರಸೂತಿ ತೀವ್ರ ನಿಗಾ ಘಟಕ, ಕ್ರಿಟಿಕಲ್ ಕೇರ್ ಘಟಕ ಹಾಗೂ ಹೈರಿಸ್ಕ್ ಪ್ರೆಗ್ನೆನ್ಸಿ ಡೆಲಿವರಿ ಘಟಕಗಳು ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ತಿಳಿಸಿದ್ದಾರೆ.

ವಿವಿಧ ಸಂಘ-ಸಂಸ್ಥೆಗಳ ಸಿಎಸ್‌ಆರ್ ಅನುದಾನದ ನೆರವಿನಿಂದ ಒದಗಿಸಲಾದ ಅತ್ಯಾಧುನಿಕ ಜೀವ ರಕ್ಷಕ ಉಪಕರಣಗಳು ಗುಣಮಟ್ಟದ ಚಿಕಿತ್ಸಾ ಸೇವೆ ನೀಡಲು ಸಹಕಾರಿಯಾಗಿವೆ. ಆರೋಗ್ಯ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಮಾಜಮುಖಿ ಸಂಸ್ಥೆಗಳ ಸಹಕಾರವನ್ನು ಸ್ಮರಿಸಿದ ಡಾ. ದುರ್ಗಾಪ್ರಸಾದ್, ಆಸ್ಪತ್ರೆಯ ಸಾಧನೆಯ ಮಟ್ಟವನ್ನು ಮುಂದುವರಿಸಲು ಸಿಬ್ಬಂದಿ ನಿರಂತರವಾಗಿ ಶ್ರಮಿಸಬೇಕು ಎಂದು ತಿಳಿಸಿದ್ದಾರೆ.

Author

ANU News

Follow Me
Other Articles
Previous

Mangaluru’s Lady Goschen Hospital Bags State Award for Zero Maternal Deaths in Abortion Care

Next

ನವೆಂಬರ್ 7ರಂದು ಒಂದು ಲಕ್ಷ ದೀಪಗಳಿಂದ ಕಂಗೊಳಿಸಲಿರುವ ಅಯೋಧ್ಯೆ ರಾಮ ಮಂದಿರ

Recent Posts

  • ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಸಾರ್ವಜನಿಕ ದೋಷಾರೋಪಣೆ’: ರಾಜೀನಾಮೆಗೆ ‘ಇಂಡಿಯಾ’ ಒಕ್ಕೂಟ ಆಗ್ರಹ
  • INDIA Bloc Holds ‘Public Impeachment’ Event Against CEC Gyanesh Kumar, Demands His Exit
  • Bullet Train Corridor Extension to Guwahati a Major Boost for Northeast: Himanta Biswa Sarma
  • ಕುಣಿಯಲಾಗದವನಿಗೆ ನೆಲ ಡೊಂಕು: ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ನೇರ ಸವಾಲು
  • ರಾಜ್ಯೋತ್ಸವ: ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಭುವನೇಶ್ವರಿ ಪ್ರತಿಮೆಗೆ ಸಿಎಂ ಪುಷ್ಪಾರ್ಚನೆ
Copyright 2026 — ANU News. All rights reserved. Blogsy WordPress Theme