Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

VB-G-RAMG: ಹೊಸ ಗ್ರಾಮೀಣ ಉದ್ಯೋಗ ಕಾಯ್ದೆಯಡಿ 125 ದಿನಗಳ ಕೆಲಸದ ಖಾತ್ರಿ

By ANU News
October 24, 2026 2 Min Read
Comments Off on VB-G-RAMG: ಹೊಸ ಗ್ರಾಮೀಣ ಉದ್ಯೋಗ ಕಾಯ್ದೆಯಡಿ 125 ದಿನಗಳ ಕೆಲಸದ ಖಾತ್ರಿ

ನವದೆಹಲಿ: ಗ್ರಾಮೀಣ ಕುಟುಂಬಗಳಿಗೆ ಪ್ರತಿ ಆರ್ಥಿಕ ವರ್ಷದಲ್ಲಿ 125 ದಿನಗಳ ವೇತನ ಸಹಿತ ಉದ್ಯೋಗದ ಖಾತ್ರಿ ನೀಡುವ ‘ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಯೋಜನೆಯಡಿ ಇದುವರೆಗೆ 31.69 ಕೋಟಿಗೂ ಹೆಚ್ಚು ಮಾನವ-ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.

2026ರ ಜುಲೈ 1ರಂದು ಜಾರಿಗೆ ಬಂದ ಈ ಯೋಜನೆಯು ‘ವಿಕಸಿತ ಭಾರತ @2047’ ದೃಷ್ಟಿಕೋನಕ್ಕೆ ಅನುಗುಣವಾಗಿ ರೂಪಿಸಲಾಗಿದೆ. VB-G RAM G ಕಾಯ್ದೆ, 2025ರ ಅಡಿಯಲ್ಲಿ, ಕೌಶಲ್ಯರಹಿತ ದೈಹಿಕ ಕೆಲಸ ಮಾಡಲು ಸಿದ್ಧರಿರುವ ಗ್ರಾಮೀಣ ಕುಟುಂಬಗಳ ವಯಸ್ಕ ಸದಸ್ಯರಿಗೆ ಪ್ರತಿ ಆರ್ಥಿಕ ವರ್ಷದಲ್ಲಿ 125 ದಿನಗಳ ವೇತನ ಸಹಿತ ಉದ್ಯೋಗದ ಶಾಸನಬದ್ಧ ಖಾತ್ರಿ ನೀಡಲಾಗುತ್ತದೆ. ಈ ಯೋಜನೆಯು ಹಿಂದಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA)ಯ ಬದಲಿಗೆ ಜಾರಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್ 24, 2026ರ ವೇಳೆಗೆ ಯೋಜನೆಯಡಿ 10.88 ಕೋಟಿ ಸಕ್ರಿಯ ಕಾರ್ಮಿಕರಿದ್ದರು. ಸುಮಾರು 2.23 ಕೋಟಿ ಗ್ರಾಮೀಣ ಕುಟುಂಬಗಳ 2.81 ಕೋಟಿಗೂ ಹೆಚ್ಚು ಕಾರ್ಮಿಕರಿಗೆ ಬೇಡಿಕೆಯ ಮೇರೆಗೆ ಉದ್ಯೋಗ ಒದಗಿಸಲಾಗಿದೆ. ಉದ್ಯೋಗ ಪಡೆದವರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ. 61.65ರಷ್ಟಿದೆ. ಇದೇ ಅವಧಿಯಲ್ಲಿ 15.17 ಕೋಟಿ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 2.83 ಲಕ್ಷ ಆಸ್ತಿಗಳನ್ನು ನಿರ್ಮಿಸಲಾಗಿದೆ.

ಯೋಜನೆಯು ನೀರಿನ ಭದ್ರತೆ, ಮೂಲಭೂತ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯಕ್ಕೆ ಪೂರಕವಾದ ಮೂಲಸೌಕರ್ಯ ಮತ್ತು ಹವಾಮಾನ ವೈಪರೀತ್ಯಗಳ ಪರಿಣಾಮ ತಗ್ಗಿಸುವಿಕೆ ಎಂಬ ನಾಲ್ಕು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತದೆ. ಉದ್ಯೋಗ ಸೃಷ್ಟಿಯ ಜತೆಗೆ ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳ ನಿರ್ಮಾಣ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕಾಮಗಾರಿಗಳನ್ನು ಆಯ್ಕೆ ಮಾಡಲು ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ಗಳನ್ನು ರೂಪಿಸಲಾಗುತ್ತದೆ. ಗ್ರಾಮ ಪಂಚಾಯಿತಿಗಳು ಅಸ್ತಿತ್ವದಲ್ಲಿರುವ ಆಸ್ತಿಗಳು ಮತ್ತು ಮೂಲಸೌಕರ್ಯದ ಕೊರತೆಗಳನ್ನು ಗುರುತಿಸಿ, ಗ್ರಾಮಸಭೆಯ ಭಾಗವಹಿಸುವಿಕೆ ಹಾಗೂ ಅನುಮೋದನೆಯೊಂದಿಗೆ ಕಾಮಗಾರಿಗಳಿಗೆ ಆದ್ಯತೆ ನೀಡುತ್ತವೆ. ಜಿಐಎಸ್, ಯುಕ್ತಧಾರಾ ಮತ್ತು ಪಿಎಂ ಗತಿಶಕ್ತಿ ಸೇರಿದಂತೆ ಡಿಜಿಟಲ್ ಪರಿಕರಗಳ ಮೂಲಕ ಯೋಜನೆ ರೂಪಿಸುವುದು, ಅಭಿವೃದ್ಧಿಯ ಅಗತ್ಯಗಳನ್ನು ಗುರುತಿಸುವುದು ಮತ್ತು ಕಾಮಗಾರಿಗಳ ಪುನರಾವರ್ತನೆ ತಪ್ಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ನಾಲ್ಕು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 318 ಬಗೆಯ ಅನುಮೋದಿತ ಕಾಮಗಾರಿಗಳನ್ನು ಗುರುತಿಸಲಾಗಿದೆ.

ಸಚಿವಾಲಯದ ಮಾಹಿತಿ ಪ್ರಕಾರ, ಯೋಜನೆಯಡಿ 97.17 ಲಕ್ಷ ಕಾಮಗಾರಿಗಳು ಕಾರ್ಯರೂಪಕ್ಕೆ ಬಂದಿದ್ದು, ಭವಿಷ್ಯದ ಉದ್ಯೋಗ ಬೇಡಿಕೆಯನ್ನು ಪೂರೈಸಲು 73.24 ಲಕ್ಷ ಅನುಮೋದಿತ ಕಾಮಗಾರಿಗಳು ಲಭ್ಯವಿವೆ. ಸುಮಾರು 2.31 ಲಕ್ಷ ಗ್ರಾಮ ಪಂಚಾಯಿತಿಗಳು ಕಾಮಗಾರಿಗಳನ್ನು ನಿರ್ವಹಿಸುತ್ತಿವೆ. 2026–27ನೇ ಸಾಲಿನಲ್ಲಿ ಡಿಜಿಟಲ್ ಬೆನಿಫಿಟ್ ಟ್ರಾನ್ಸ್‌ಫರ್ ವ್ಯವಸ್ಥೆಯಡಿ 3.76 ಕೋಟಿ ವಹಿವಾಟುಗಳು ದಾಖಲಾಗಿವೆ.

2026–27ನೇ ಸಾಲಿಗೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಧ್ಯಂತರ ಹಂಚಿಕೆಯಾಗಿ ₹93,841 ಕೋಟಿ ಮೀಸಲಿಟ್ಟಿದ್ದು, ಮೊದಲ ಕಂತಿನಲ್ಲಿ ₹25,880 ಕೋಟಿಯನ್ನು ಮಂಜೂರು ಮಾಡಿದೆ. ಇ-ಕೆವೈಸಿ, ಮುಖಚಹರೆ ಮತ್ತು ಬಯೋಮೆಟ್ರಿಕ್ ದೃಢೀಕರಣ, ಜಿಯೋ-ಟ್ಯಾಗಿಂಗ್, ಎಲೆಕ್ಟ್ರಾನಿಕ್ ಮಾಪನ ಪುಸ್ತಕಗಳು ಹಾಗೂ ಮೊಬೈಲ್ ಆಧಾರಿತ ಮೇಲ್ವಿಚಾರಣೆಯ ಮೂಲಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ನೈಜ-ಸಮಯದ ಡ್ಯಾಶ್‌ಬೋರ್ಡ್‌ಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ಲೇಷಣೆಗಳೂ ಮೇಲ್ವಿಚಾರಣೆಗೆ ನೆರವಾಗಲಿವೆ.

ಉದ್ಯೋಗ, ತಂತ್ರಜ್ಞಾನ ಮತ್ತು ಸಾರ್ವಜನಿಕ ಹೂಡಿಕೆಯನ್ನು ಸಮನ್ವಯಗೊಳಿಸುವ ಮೂಲಕ ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವುದು ಹಾಗೂ ಸುಸ್ಥಿರ ಗ್ರಾಮೀಣ ಮೂಲಸೌಕರ್ಯ ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವಾಲಯ ತಿಳಿಸಿದೆ.

Author

ANU News

Follow Me
Other Articles
Previous

BJP Slams Rahul Gandhi Over November 1 Rally, Cites 1984 Anti-Sikh Riots

Next

30ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತದ ಆಟಗಾರ್ತಿ ಎಸ್. ಮೇಘನಾ

Recent Posts

  • ಭಾರತ ಶೇ.7ರಷ್ಟು ಬೆಳೆಯುವಾಗ ಅಮೆರಿಕ ಏಕೆ ಸಾಧ್ಯವಿಲ್ಲ? ಫೆಡ್ ವಿರುದ್ಧ ಟ್ರಂಪ್ ವಾಗ್ದಾಳಿ
  • 50 crore people lifted out of poverty in 12-13 years: PM Modi
  • 12 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಮುಕ್ತ: ಪ್ರಧಾನಿ ಮೋದಿ
  • US President Donald Trump Open to Immigration Talks with Democrats
  • ಅಕ್ರಮ ವಲಸಿಗರ ವಿಚಾರದಲ್ಲಿ ಡೆಮಾಕ್ರಾಟ್‌ಗಳೊಂದಿಗೆ ಮಾತುಕತೆಗೆ ಟ್ರಂಪ್ ಸಿದ್ಧ
Copyright 2026 — ANU News. All rights reserved. Blogsy WordPress Theme