Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಎಲ್ಲ ಅರ್ಹ ರೈತ ಕುಟುಂಬಗಳಿಗೂ ₹2,500 ಪರಿಹಾರ ತಲುಪಿಸುತ್ತೇವೆ: ಡಾ. ಜಿ. ಪರಮೇಶ್ವರ್

By ANU News
November 12, 2026 2 Min Read
Comments Off on ಎಲ್ಲ ಅರ್ಹ ರೈತ ಕುಟುಂಬಗಳಿಗೂ ₹2,500 ಪರಿಹಾರ ತಲುಪಿಸುತ್ತೇವೆ: ಡಾ. ಜಿ. ಪರಮೇಶ್ವರ್

ಬೆಂಗಳೂರು: ಬರ ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಿ, ಎಲ್ಲ ಅರ್ಹ ರೈತ ಕುಟುಂಬಗಳಿಗೂ ಸರ್ಕಾರ ಘೋಷಿಸಿರುವ ಪರಿಹಾರ ತಲುಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಹಾಗೂ ತಾವು ಪ್ರತಿ ರೈತ ಕುಟುಂಬಕ್ಕೆ ₹2,500 ಪರಿಹಾರ ನೀಡುವುದಾಗಿ ಘೋಷಿಸಿದ್ದೆವು. ಆದರೆ ಅಧಿಕಾರಿಗಳ ಹಂತದಲ್ಲಿ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ವಿತರಣೆಯಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಿದರು.

ಕೆಲವು ರೈತರಿಗೆ ₹1,500 ಹಾಗೂ ಇನ್ನು ಕೆಲವರಿಗೆ ₹2,000 ಪಾವತಿಯಾಗಿರುವುದು ಗಮನಕ್ಕೆ ಬಂದಿದೆ. ಪ್ರತಿ ಎಕರೆಗೆ ಲೆಕ್ಕ ಹಾಕಿ ಹಣ ವರ್ಗಾವಣೆ ಮಾಡಿರುವ ಸಾಧ್ಯತೆಯಿದೆ. ಈ ಲೋಪ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಣಕಾಸಿನ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲ ಹಂತದಲ್ಲಿ ಸುಮಾರು 50 ಲಕ್ಷ ರೈತ ಕುಟುಂಬಗಳಿಗೆ ತಲಾ ₹2,500 ನೀಡಲು ₹1,250 ಕೋಟಿ ಮೀಸಲಿಡಲಾಗಿದೆ. ಎರಡನೇ ಹಂತದಲ್ಲಿಯೂ ತಲಾ ₹2,500 ನೀಡುವ ಉದ್ದೇಶವಿದ್ದು, ಒಟ್ಟಾರೆ ಅರ್ಹ ರೈತ ಕುಟುಂಬಗಳಿಗೆ ₹5,000 ಪರಿಹಾರ ಒದಗಿಸಲು ಸರ್ಕಾರ ನಿರ್ಧರಿಸಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಪರಿಶೀಲಿಸಿ ಹಣ ವಿತರಿಸಲಾಗುವುದು ಎಂದರು.

ವಿತರಣೆಯಲ್ಲಿನ ವ್ಯತ್ಯಾಸ ಸರಿಪಡಿಸಲು ಹಣಕಾಸು ಇಲಾಖೆಯ ಅನುಮತಿ ಪಡೆಯಲಾಗುವುದು. ಅಗತ್ಯವಿದ್ದರೆ ಈಗಾಗಲೇ ಪಾವತಿಸಿರುವ ಮೊತ್ತಕ್ಕೆ ಎರಡನೇ ಕಂತಿನ ಹಣ ಸೇರಿಸಿ ₹3,000 ಅಥವಾ ₹3,500 ನೀಡುವ ಬಗ್ಗೆಯೂ ಪರಿಶೀಲಿಸಲಾಗುವುದು. ಯಾದಗಿರಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ಪ್ರಕ್ರಿಯೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಎನ್‌ಡಿಆರ್‌ಎಫ್ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಎರಡು ವಾರಗಳಿಗೂ ಹೆಚ್ಚು ಸಮಯ ಕಳೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಮಯಾವಕಾಶ ದೊರೆತ ತಕ್ಷಣ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪರಮೇಶ್ವರ್ ಹೇಳಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕೆ ಸರ್ಕಾರ ಕಾನೂನು ಜಾರಿಗೆ ತಂದಿದ್ದು, ಸಾಲ ಮರುಪಾವತಿಯನ್ನು ಆರು ತಿಂಗಳವರೆಗೆ ಮುಂದೂಡುವ ಕ್ರಮ ಕೈಗೊಂಡಿದೆ. ಖಾಸಗಿ ಸಾಲದಾತರಿಂದ ರೈತರಿಗೆ ಕಿರುಕುಳವಾಗದಂತೆ ತಡೆಯುವ ಅಗತ್ಯವೂ ಇದೆ ಎಂದು ಅಭಿಪ್ರಾಯಪಟ್ಟರು.

ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ರೈತರಿಗೆ ನೋಟಿಸ್ ನೀಡುತ್ತಿರುವ ವಿಚಾರದಲ್ಲಿಯೂ ಸರ್ಕಾರ ಈಗಾಗಲೇ ನಿರ್ದೇಶನ ನೀಡಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ನ್ಯಾಯಯುತ ಅನುದಾನ ಮತ್ತು ಹಣಕಾಸಿನ ಪಾಲು ಸಮರ್ಪಕವಾಗಿ ದೊರೆಯದಿರುವುದು ರಾಜ್ಯದ ಆರ್ಥಿಕ ಹೊರೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪರಮೇಶ್ವರ್ ಆರೋಪಿಸಿದರು.

ಡೀಸೆಲ್ ಸೇರಿದಂತೆ ಕೃಷಿ ಪರಿಕರಗಳ ಬೆಲೆ ಏರಿಕೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹಾಲು ಉತ್ಪಾದನೆಯೂ ಕಡಿಮೆಯಾಗಿದ್ದು, ಹಾಲು ಉತ್ಪಾದಕರಿಗೆ ಸೂಕ್ತ ದರ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರಿಗೂ ಆರ್ಥಿಕ ಹೊರೆ ಉಂಟಾಗುತ್ತಿರುವುದನ್ನು ಸರ್ಕಾರ ನಿರಾಕರಿಸುವುದಿಲ್ಲ ಎಂದರು.

ರಾಜ್ಯದಲ್ಲಿ ಶೇ.56ರಷ್ಟು ಮೀಸಲಾತಿ ಕಲ್ಪಿಸುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಶೇ.50ರ ಮಿತಿಗೆ ಸೀಮಿತಗೊಳಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿಗೆ ಸಂವಿಧಾನದ ಒಂಬತ್ತನೇ ಅನುಸೂಚಿಯಡಿ ರಕ್ಷಣೆ ನೀಡಲಾಗಿದೆ. ಅದೇ ರೀತಿಯ ಕ್ರಮ ಕರ್ನಾಟಕದಲ್ಲಿಯೂ ಸಾಧ್ಯವೇ ಎಂಬ ಪ್ರಶ್ನೆಯಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಒಂಬತ್ತನೇ ಅನುಸೂಚಿಗೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕಿತ್ತು. ಇದೀಗ ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಕಾಯಬೇಕಾಗಿದೆ ಎಂದು ಹೇಳಿದರು.

Author

ANU News

Follow Me
Other Articles
Previous

2027ರಲ್ಲಿ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿ.ಕೆ. ಶಿವಕುಮಾರ್ ಘೋಷಣೆ

Next

ಶೇ.56ರಷ್ಟು ಮೀಸಲಾತಿ ವಿಚಾರ; ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಕರ್ನಾಟಕ; ಪರಮೇಶ್ವರ್

Recent Posts

  • Bengaluru to Host 27th All India Police Lawn Tennis Championship from November 16
  • JDS Seeks Independent Probe into Corruption Allegations at Hassan DC Office
  • ಹಾಸನ ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ: ಸ್ವತಂತ್ರ ತನಿಖೆಗೆ ಜೆಡಿಎಸ್ ಶಾಸಕರ ಆಗ್ರಹ, CSಗೆ ಮನವಿ
  • Karnataka Moves Supreme Court Over 56% Reservation Quota, Says Parameshwara
  • ಶೇ.56ರಷ್ಟು ಮೀಸಲಾತಿ ವಿಚಾರ; ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಕರ್ನಾಟಕ; ಪರಮೇಶ್ವರ್
Copyright 2026 — ANU News. All rights reserved. Blogsy WordPress Theme