ರಾಹುಲ್ ಗಾಂಧಿ-ಕಸಬ್ ಹೋಲಿಕೆ; ನಿವೃತ್ತ ವಾಯುಪಡೆ ಅಧಿಕಾರಿಯ ವಿರುದ್ಧ ಸೈಬರ್ ದೂರು
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 2008ರ ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿ ಅಜ್ಮಲ್ ಕಸಬ್‌ಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಭಾರತೀಯ ವಾಯುಪಡೆಯ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಅನೂಪ್ ವರ್ಮಾ ವಿರುದ್ಧ ಕಾಂಗ್ರೆಸ್ ಸೇವಾ ದಳದ ಕಾನೂನು ಘಟಕ ಸೈಬರ್ ದೂರು ದಾಖಲಿಸಿದೆ.
ವರ್ಮಾ ಅವರು ಮಂಗಳವಾರ ‘ಎಕ್ಸ್’ನಲ್ಲಿ ರಾಹುಲ್ ಗಾಂಧಿ ಹಾಗೂ ಅಜ್ಮಲ್ ಕಸಬ್ ಬ್ಯಾಗ್ ಹಿಡಿದು ನಡೆದುಕೊಂಡು ಹೋಗುತ್ತಿರುವ ಚಿತ್ರಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದರು. ಅದರೊಂದಿಗೆ, ಎಡಭಾಗದಲ್ಲಿರುವ ವ್ಯಕ್ತಿ ಭಾರತಕ್ಕೆ ಹೆಚ್ಚು ಅಪಾಯಕಾರಿ ಎಂದು ಹೇಳಿಕೊಂಡಿದ್ದರು.
ಈ ಪೋಸ್ಟ್‌ಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು 26/11 ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷೆಗೊಳಗಾದ ಕಸಬ್‌ಗೆ ಹೋಲಿಸಿರುವುದು ಆಕ್ಷೇಪಾರ್ಹ ಎಂದು ಕಾಂಗ್ರೆಸ್ ಸೇವಾ ದಳದ ಕಾನೂನು ಘಟಕ ಹೇಳಿದೆ.

ಈ ಪ್ರಕರಣವನ್ನು ಸೂಕ್ತ ಕಾನೂನು ಮಾರ್ಗಗಳ ಮೂಲಕ ಮುಂದುವರಿಸುವುದಾಗಿ ಸಂಘಟನೆ ತಿಳಿಸಿದೆ. ಕಾಂಗ್ರೆಸ್ ಪಕ್ಷ, ಅದರ ನಾಯಕರು ಮತ್ತು ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆಯುವ ಯಾವುದೇ ದುರುದ್ದೇಶಪೂರಿತ ಅಥವಾ ಕಾನೂನುಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಹೇಳಿದೆ.
ಸಾಂವಿಧಾನಿಕ ಹುದ್ದೆಗಳಿಗೆ ಧಕ್ಕೆ ತರುವ, ಕಾಂಗ್ರೆಸ್ ನಾಯಕರ ಮಾನಹಾನಿ ಮಾಡುವ ಅಥವಾ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯವನ್ನು ಭಯೋತ್ಪಾದನೆಯೊಂದಿಗೆ ಸಮೀಕರಿಸುವಂತಹ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಸೇವಾ ದಳ ತಿಳಿಸಿದೆ.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನದ 19ನೇ ವಿಧಿಯಡಿ ರಕ್ಷಣೆ ಇದೆ. ಆದರೆ ಈ ಹಕ್ಕುಗಳು ಕಾನೂನುಬದ್ಧ ನಿರ್ಬಂಧಗಳಿಗೆ ಒಳಪಟ್ಟಿವೆ ಎಂದು ಸಂಘಟನೆ ಹೇಳಿದ್ದು, ಸಂವಿಧಾನ, ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಅನ್ವಯವಾಗುವ ಸೈಬರ್ ಕಾನೂನುಗಳ ಅಡಿಯಲ್ಲಿ ಪರಿಹಾರ ಪಡೆಯುವುದಾಗಿ ತಿಳಿಸಿದೆ.