ಉತ್ತರ ಪ್ರದೇಶ ಅಖಾಡದಲ್ಲಿ ಕೈ-ಎಸ್ಪಿ ‘ದೋಸ್ತಿ’; ವಿಧಾನಸಭಾ ಚುನಾವಣೆಗೆ ಎಸ್‌ಪಿ ಮೊದಲ ಪಟ್ಟಿ ಬಿಡುಗಡೆ
ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ (SP) ಐವರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಕೈರಾನಾದಿಂದ ನಾಹಿದ್ ಹಸನ್, ಬೆಹಟ್‌ನಿಂದ ಉಮರ್ ಅಲಿ ಖಾನ್, ಸಹರಾನ್‌ಪುರದಿಂದ ಆಶು ಮಲಿಕ್, ಅಮ್ರೋಹಾದಿಂದ ಮೆಹಬೂಬ್ ಅಲಿ ಹಾಗೂ ಲಲಿತ್‌ಪುರದಿಂದ ಜ್ಯೋತಿ ಲೋಧಿ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ ಜೊತೆ ಬಲಿಷ್ಠ ಮೈತ್ರಿ ರೂಪಿಸಲು ವಿಸ್ತೃತ ಚರ್ಚೆ ನಡೆಸುವಂತೆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕರೆ ನೀಡಿದ್ದಾರೆ. ಬಿಜೆಪಿಯನ್ನು ಎದುರಿಸಲು ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಕ್ಷೇತ್ರ ಹಂಚಿಕೆಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದೇ ಮೈತ್ರಿಯ ಗುರಿಯಾಗಬೇಕು ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಆದ್ಯತೆ ನೀಡಿರುವ 26 ಕ್ಷೇತ್ರಗಳ ಕುರಿತು ಚರ್ಚೆ ನಡೆದಿದ್ದು, ಗೆಲ್ಲುವ ಸಾಧ್ಯತೆಯಿರುವ ಹೆಚ್ಚುವರಿ ಕ್ಷೇತ್ರಗಳ ಪಟ್ಟಿಯನ್ನೂ ನೀಡುವಂತೆ ಮನವಿ ಮಾಡಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪರಸ್ಪರ ಒಪ್ಪಿಗೆಯಿಂದ ನಡೆಯಬೇಕು; ಯಾರ ಮೇಲೂ ಹೇರಬಾರದು ಎಂದು ಅಖಿಲೇಶ್ ಹೇಳಿದ್ದಾರೆ. ಎರಡೂ ಪಕ್ಷಗಳ ಸಂಘಟನಾ ಬಲ ಒಗ್ಗೂಡಿದರೆ ಚುನಾವಣೆಯಲ್ಲಿ ಯಶಸ್ಸು ಸಾಧಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.