ಈಜಿಪ್ಟ್‌ನಲ್ಲಿ ಎರಡು ರೈಲುಗಳ ಡಿಕ್ಕಿ: ಭಾರೀ ಸಾವು ನೋವು
ಕೈರೋ: ಈಜಿಪ್ಟ್‌ನ ಗಿಜಾ ಪ್ರಾಂತ್ಯದಲ್ಲಿ ಎರಡು ರೈಲುಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, 112 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 45 ಮಂದಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕಫ್ರ್ ಅಮ್ಮಾರ್ ಮತ್ತು ಅಲ್-ರಕ್ಕಾ ನಿಲ್ದಾಣಗಳ ನಡುವೆ ಗಿಜಾ-ಫಯೂಮ್ ಮಾರ್ಗದ ರೈಲು, ಕೈರೋ-ಅಸ್ವಾನ್ ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ರಕ್ಷಣಾ ಕಾರ್ಯಾಚರಣೆಗೆ 72 ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆರೋಗ್ಯ ಸಚಿವ ಖಾಲೆದ್ ಅಬ್ದೆಲ್ ಘಫಾರ್ ಸೂಚಿಸಿದ್ದಾರೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಅಪಘಾತದ ತ್ವರಿತ ತನಿಖೆ ನಡೆಸಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಅವಶೇಷ ತೆರವು ಹಾಗೂ ರೈಲು ಸಂಚಾರ ಪುನರಾರಂಭಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಹಳೆಯ ರೈಲ್ವೆ ಉಪಕರಣಗಳು ಮತ್ತು ನಿರ್ವಹಣಾ ಲೋಪಗಳು ಈಜಿಪ್ಟ್‌ನಲ್ಲಿ ಪದೇಪದೇ ರೈಲು ಅಪಘಾತಗಳಿಗೆ ಕಾರಣವಾಗುತ್ತಿವೆ.