ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಮೃತರ ಕುಟುಂಬಗಳಿಗೆ ಸರ್ಕಾರದ ನೆರವಿನ ಭರವಸೆ
ಬೆಂಗಳೂರು: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ದೆಹಲಿ ಮೂಲದ ಪೈಲಟ್ ಹಾಗೂ ಕರ್ನಾಟಕದ ಐವರು ಪ್ರಯಾಣಿಕರು ಮೃತಪಟ್ಟಿರುವುದು ತೀವ್ರ ಆಘಾತ ಮತ್ತು ದುಃಖ ಉಂಟುಮಾಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕ್ಯಾಪ್ಟನ್ ಹಿಮಾಂಶು, ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ, ಪ್ರತಾಪ್ ಬಿ. ನಿಂಗರಾಜು, ಶಂಕರಗೌಡ ವಿ.ಬಿ., ಸುಧೀರ್ ಕೆ. ಹಾಗೂ ಎಚ್.ಎಸ್. ನಟರಾಜು ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಅಗಲಿದವರ ಕುಟುಂಬಸ್ಥರಿಗೆ ಈ ಅಪಾರ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹಾರೈಸಿರುವ ಅವರು, ಮೃತದೇಹಗಳನ್ನು ಆದಷ್ಟು ಬೇಗ ಕರ್ನಾಟಕಕ್ಕೆ ತರಲು ಉತ್ತರಾಖಂಡದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ದುಃಖದ ಸಮಯದಲ್ಲಿ ರಾಜ್ಯ ಸರ್ಕಾರ ಮೃತರ ಕುಟುಂಬಗಳೊಂದಿಗೆ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಸಂತಾಪ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಕನ್ನಡಿಗರು ಮೃತಪಟ್ಟಿರುವ ಸುದ್ದಿ ಅತ್ಯಂತ ದುಃಖದಾಯಕವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ ಸೂಚಿಸಿದ್ದಾರೆ.
ಪ್ರವಾಸಕ್ಕೆ ತೆರಳಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ ಅವರು ದುರಂತದಲ್ಲಿ ಜೀವ ಕಳೆದುಕೊಂಡಿರುವುದು ಪೊಲೀಸ್ ಇಲಾಖೆಗೆ ತೀವ್ರ ನೋವು ತಂದಿದೆ ಎಂದು ಹೇಳಿದ್ದಾರೆ.
ಅರುಣ್ ಸಾಲಂಕೆ ಅವರೊಂದಿಗೆ ಮೃತಪಟ್ಟ ಪ್ರತಾಪ್, ಶಂಕರಗೌಡ, ಸುಧೀರ್, ಎಚ್.ಎಸ್. ನಟರಾಜ್ ಹಾಗೂ ಹೆಲಿಕಾಪ್ಟರ್ ಪೈಲಟ್ ಕ್ಯಾಪ್ಟನ್ ಹಿಮಾಂಶು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರ ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಸಚಿವರು ಹಾರೈಸಿದ್ದಾರೆ.