ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ; ಭೂತಾನ್, ಬಾಂಗ್ಲಾದೇಶ, ಚೀನಾದಲ್ಲೂ ಕಂಪನದ ಅನುಭವ
ಕಠ್ಮಂಡು: ನೇಪಾಳದ ಕೋಶಿ ಪ್ರಾಂತ್ಯದ ಲೆಲೆಪ್ ಸಮೀಪ ಮಂಗಳವಾರ ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಭಾರತ, ಭೂತಾನ್, ಬಾಂಗ್ಲಾದೇಶ ಮತ್ತು ಚೀನಾದ ಹಲವು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಬೆಳಗ್ಗೆ 7.02ಕ್ಕೆ ಸಂಭವಿಸಿದ ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 20 ಕಿ.ಮೀ. ಆಳದಲ್ಲಿ ದಾಖಲಾಗಿದೆ. ಭಾರತದ ಬಿಹಾರ, ಮೇಘಾಲಯ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲೂ ಭೂಮಿ ಕಂಪಿಸಿದೆ.

ಭೂಕಂಪದಿಂದ ಯಾವುದೇ ಸಾವು-ನೋವು ಅಥವಾ ಆಸ್ತಿ ಹಾನಿಯಾದ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ.
ಇದೇ ವೇಳೆ, ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ 3.39ಕ್ಕೆ 2.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು 15 ಕಿ.ಮೀ. ಆಳದಲ್ಲಿತ್ತು. ಈ ಘಟನೆಯಿಂದಲೂ ಯಾವುದೇ ಹಾನಿ ವರದಿಯಾಗಿಲ್ಲ.