ಮೋದಿ ಹುಟ್ಟುಹಬ್ಬ: ಅಂತರಶಾಲಾ ವಾಲಿಬಾಲ್ ಪಂದ್ಯಾವಳಿ, ಕ್ರೀಡಾಂಗಣ ಲೋಕಾರ್ಪಣೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್‌ನಲ್ಲಿ ‘ಸೇವಾ ಸಂಕಲ್ಪ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ನವೀಕರಣಗೊಂಡ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಾಯಿತು. ಅಂತರಶಾಲಾ ‘ಮೋದಿ ಕಪ್-2026’ ವಾಲಿಬಾಲ್ ಪಂದ್ಯಾವಳಿಗೂ ಚಾಲನೆ ನೀಡಲಾಯಿತು.
ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದರು. ಬಿಬಿಎಂಪಿ ಮಾಜಿ ಸದಸ್ಯರಾದ ಎಂ. ಮುನಿರಾಜು, ಶಕೀಲಾ ಮುನಿರಾಜು, ಮಂಡಲ ಬಿಜೆಪಿ ಕಾರ್ಯದರ್ಶಿ ಎಂ.ಎಸ್. ಸಂಜಯ್ ಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

‘ದೇಶ ಸುಭದ್ರವಾಗಿದೆ’
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್. ಸುರೇಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಪ್ರಧಾನ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಮೋದಿ ಅವರ ಆಡಳಿತಾವಧಿಯಲ್ಲಿ ದೇಶ ಬಲಿಷ್ಠ ರಾಷ್ಟ್ರವಾಗಿ ರೂಪುಗೊಂಡಿದೆ ಎಂದು ಹೇಳಿದ ಅವರು, ಕೋವಿಡ್ ಅವಧಿಯಲ್ಲಿ ಕೈಗೊಂಡ ಕ್ರಮಗಳು ಹಾಗೂ ‘ಆಪರೇಷನ್ ಸಿಂಧೂರ್’ ಮೂಲಕ ಭಾರತದ ಸೈನಿಕ ಸಾಮರ್ಥ್ಯ ಜಗತ್ತಿಗೆ ಪರಿಚಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೇವಾ ಸಂಕಲ್ಪದಡಿ ಅಂತರಶಾಲಾ ವಾಲಿಬಾಲ್ ಪಂದ್ಯಾವಳಿ, ನವೀಕರಣಗೊಂಡ ಕ್ರೀಡಾಂಗಣ, ಶುದ್ಧ ಕುಡಿಯುವ ನೀರಿನ ಘಟಕ, ನೀರಿನ ಕ್ಯಾನ್‌ಗಳ ವಿತರಣೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
500 ನೀರಿನ ಕ್ಯಾನ್‌ಗಳ ವಿತರಣೆ
ಪೌರ ಕಾರ್ಮಿಕ ಮಹಿಳೆಯರಿಂದ ಶ್ರೀ ದೇವಿ ಗಂಗಮ್ಮ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಬಳಿಕ ಸಾರ್ವಜನಿಕರಿಗೆ 20 ಲೀಟರ್ ಸಾಮರ್ಥ್ಯದ 500 ನೀರಿನ ಕ್ಯಾನ್‌ಗಳನ್ನು ವಿತರಿಸಲಾಯಿತು. ಪೌರ ಕಾರ್ಮಿಕ ಮಹಿಳೆಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರಾವ್, ಮಂಡಲ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.