ಅರ್ನಬ್ ಅಬ್ಬರ: ದಕ್ಷಿಣ ಒಡಿಶಾದಲ್ಲಿ ಭಾರಿ ಮಳೆ, 23,827 ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ
ಭುವನೇಶ್ವರ: ಸೈಕ್ಲೋನ್ ಅರ್ನಬ್ ಪರಿಣಾಮದಿಂದ ದಕ್ಷಿಣ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಮಲ್ಕಾನಗಿರಿ, ಕೊರಾಪುಟ್, ರಾಯಗಡ, ಗಜಪತಿ ಮತ್ತು ಗಂಜಾಂ ಜಿಲ್ಲೆಗಳು ಹೆಚ್ಚು ಬಾಧಿತವಾಗಿವೆ. ದಕ್ಷಿಣ ಒಡಿಶಾದ 17 ಬ್ಲಾಕ್‌ಗಳಲ್ಲಿ 105 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಕೊರಾಪುಟ್ ಜಿಲ್ಲೆಯ ಪಟಾಂಗಿ ಬ್ಲಾಕ್‌ನಲ್ಲಿ ಗರಿಷ್ಠ 188 ಮಿ.ಮೀ. ಹಾಗೂ ಗಜಪತಿಯ ಮೊಹನಾ ಬ್ಲಾಕ್‌ನಲ್ಲಿ 182.4 ಮಿ.ಮೀ. ಮಳೆ ದಾಖಲಾಗಿದೆ.
ಚಂಡಮಾರುತದಿಂದ ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ. ಶೂನ್ಯ ಸಾವು ಗುರಿಯನ್ನು ಸಾಧಿಸಲಾಗಿದೆ ಎಂದು ಹೇಳಿರುವ ಅವರು, ವಿಪತ್ತು ನಿರ್ವಹಣೆಗೆ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದಿದ್ದಾರೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಸಮನ್ವಯಗೊಳಿಸಲು ಎಂಟು ಜಿಲ್ಲೆಗಳಲ್ಲಿ ಎಂಟು ಸಚಿವರಿಗೆ ಹೊಣೆ ವಹಿಸಲಾಗಿದೆ. ಒಟ್ಟು 313 ತುರ್ತು ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಲಾಗಿದ್ದು, ಅವುಗಳಲ್ಲಿ 60 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRF), ಒಂಬತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ಮತ್ತು 244 ಅಗ್ನಿಶಾಮಕ ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಎಂಟು ಜಿಲ್ಲೆಗಳ 634 ಪರಿಹಾರ ಕೇಂದ್ರಗಳಲ್ಲಿ 23,827 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಶಿಬಿರಗಳಲ್ಲಿ ಸಂತ್ರಸ್ತರಿಗೆ ಸಿದ್ಧ ಆಹಾರ ಪೂರೈಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ 2,200ಕ್ಕೂ ಹೆಚ್ಚು ಗರ್ಭಿಣಿಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಸಂದರ್ಭದಲ್ಲಿ 931 ಶಿಶುಗಳು ಸುರಕ್ಷಿತವಾಗಿ ಜನಿಸಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮರಗಳು ಉರುಳಿಬಿದ್ದ ಸ್ಥಳಗಳಲ್ಲಿ ತಕ್ಷಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮಲ್ಕಾನಗಿರಿ ಜಿಲ್ಲೆಯಲ್ಲಿ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ.
ಚಂಡಮಾರುತವು ಛತ್ತೀಸ್‌ಗಢದತ್ತ ಸಾಗುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಮಳೆಯಿಂದ ಭತ್ತದ ಬೆಳೆಗಳಿಗೆ ಉಂಟಾಗಿರುವ ಹಾನಿಯ ಕುರಿತು ವರದಿ ಸಂಗ್ರಹಿಸಿದ ಬಳಿಕ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಮಾಝಿ ಭರವಸೆ ನೀಡಿದ್ದಾರೆ.