ಗ್ಲ್ಯಾಸ್ಗೋದಲ್ಲಿ ತೆರೆ ಬಿದ್ದ ಕಾಮನ್ವೆಲ್ತ್ ಗೇಮ್ಸ್; ಶತಮಾನೋತ್ಸವ ಕ್ರೀಡಾಕೂಟಕ್ಕೆ ಭಾರತ ಸಜ್ಜು
ಗ್ಲ್ಯಾಸ್ಗೋ: 2026ರ ಕಾಮನ್ವೆಲ್ತ್ ಗೇಮ್ಸ್ಗೆ ಭಾನುವಾರ ಅದ್ಧೂರಿಯಾಗಿ ತೆರೆಬಿದ್ದಿದ್ದು, 2030ರ ಶತಮಾನೋತ್ಸವ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಇದರೊಂದಿಗೆ 2030ರ ಕ್ರೀಡಾಕೂಟಕ್ಕೆ ಗುಜರಾತ್ನ ಅಹಮದಾಬಾದ್ ಆತಿಥ್ಯ ವಹಿಸುವುದು ಖಚಿತವಾಗಿದೆ.
ಸಮಾರೋಪ ಸಮಾರಂಭದಲ್ಲಿ ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ (CGF) ಧ್ವಜ ಹಾಗೂ ಆತಿಥ್ಯದ ಬ್ಯಾಟನ್ನ್ನು ಭಾರತೀಯ ನಿಯೋಗಕ್ಕೆ ಹಸ್ತಾಂತರಿಸಲಾಯಿತು. ಭಾರತದ ಪರವಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷೆ ಪಿ.ಟಿ. ಉಷಾ ಹಾಗೂ ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ಆತಿಥ್ಯದ ಹಕ್ಕನ್ನು ಸ್ವೀಕರಿಸಿದರು.
1930ರಲ್ಲಿ ಆರಂಭವಾದ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ 2030ರಲ್ಲಿ 100 ವರ್ಷಗಳು ಪೂರ್ಣಗೊಳ್ಳಲಿದ್ದು, ಈ ಐತಿಹಾಸಿಕ ಆವೃತ್ತಿಗೆ ಭಾರತ ಆತಿಥ್ಯ ವಹಿಸುವುದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. 2010ರ ದೆಹಲಿ ಕ್ರೀಡಾಕೂಟದ ಬಳಿಕ ಭಾರತದಲ್ಲಿ ನಡೆಯಲಿರುವ ಎರಡನೇ ಕಾಮನ್ವೆಲ್ತ್ ಗೇಮ್ಸ್ ಇದಾಗಿದೆ.

ಅಹಮದಾಬಾದ್ನಲ್ಲಿ 15ರಿಂದ 17 ಕ್ರೀಡಾ ವಿಭಾಗಗಳನ್ನು ಆಯೋಜಿಸಲು ಅನುಮೋದನೆ ದೊರೆತಿದ್ದು, ನರೇಂದ್ರ ಮೋದಿ ಕ್ರೀಡಾಂಗಣ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್ಕ್ಲೇವ್ ಪ್ರಮುಖ ಸ್ಪರ್ಧಾ ಕೇಂದ್ರಗಳಾಗಲಿವೆ.
ಗ್ಲ್ಯಾಸ್ಗೋ ಸಮಾರೋಪ ಸಮಾರಂಭದಲ್ಲಿ ಭಾರತದ 18 ನಿಮಿಷಗಳ ಸಾಂಸ್ಕೃತಿಕ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ‘ವಂದೇ ಮಾತರಂ’, ‘ವಸುಧೈವ ಕುಟುಂಬಕಂ’ ಸಂದೇಶ, ಭಾರತೀಯ ಸಂಗೀತ ಹಾಗೂ ನೃತ್ಯ ವೈಭವದ ಮೂಲಕ ಅಹಮದಾಬಾದ್-2030ರ ಭವ್ಯ ಚಿತ್ರಣವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲಾಯಿತು.
ಶಂಕರ್ ಮಹಾದೇವನ್, ಭೂಮಿ ತ್ರಿವೇದಿ ಹಾಗೂ ರಿಷಬ್ ಶರ್ಮಾ ಅವರ ಸಂಗೀತ ಪ್ರದರ್ಶನದೊಂದಿಗೆ ಭಾರತದ ಸಂಸ್ಕೃತಿ ಅನಾವರಣಗೊಂಡರೆ, ಸ್ಕಾಟ್ಲೆಂಡ್ನಿಂದ ಭಾರತಕ್ಕೆ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯ ಅಧಿಕೃತವಾಗಿ ವರ್ಗಾವಣೆಯಾಯಿತು.
2036ರ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಭಾರತ ಬಿಡ್ ಸಲ್ಲಿಸಿರುವ ಹಿನ್ನೆಲೆಯಲ್ಲಿ, 2030ರ ಕಾಮನ್ವೆಲ್ತ್ ಗೇಮ್ಸ್ ಯಶಸ್ವಿ ಆಯೋಜನೆ ದೇಶದ ಕ್ರೀಡಾ ಮೂಲಸೌಕರ್ಯ ಹಾಗೂ ಜಾಗತಿಕ ಮಟ್ಟದ ಸಾಮರ್ಥ್ಯವನ್ನು ಪ್ರದರ್ಶಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.