ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್ನಲ್ಲಿ ಅವಘಡ: ಪೊಲೀಸರಿಂದ ಎಫ್ಐಆರ್
ಹೈದರಾಬಾದ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಅದ್ಧೂರಿ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವಘಡ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 22ರಂದು ಹೈದರಾಬಾದ್ನ ಮಲ್ಲಾ ರೆಡ್ಡಿ ಯೂನಿವರ್ಸಿಟಿ ಆವರಣದಲ್ಲಿ ‘ಟಾಕ್ಸಿಕ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಟ ಯಶ್, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು, ಸಚಿವ ಹಾಗೂ ಶಿಕ್ಷಣ ಸಂಸ್ಥೆಗಳ ಮಾಲೀಕ ಮಲ್ಲಾ ರೆಡ್ಡಿ, ನಿರ್ಮಾಪಕ ದಿಲ್ ರಾಜು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಆಗಮಿಸಿದ್ದರು. ಯಶ್ ವೇದಿಕೆ ಮೇಲೆ ಮಾತನಾಡುತ್ತಿದ್ದ ವೇಳೆ ಕೆಲವರು ಸೌಂಡ್ ಬಾಕ್ಸ್ ಅಳವಡಿಸಿದ್ದ ಕಬ್ಬಿಣದ ಪೈಪ್ಗಳ ರಚನೆಯ ಮೇಲೆ ಏರಿ ಕುಳಿತಿದ್ದರು ಎನ್ನಲಾಗಿದೆ. ಹೆಚ್ಚಿನ ಭಾರದಿಂದ ಸೌಂಡ್ ಬಾಕ್ಸ್ ಕೆಳಗೆ ಬಿದ್ದಿದ್ದು, ಅದರೊಂದಿಗೆ ಪೈಪ್ಗಳಿಂದ ನಿರ್ಮಿಸಿದ್ದ ರಚನೆಯೂ ಕುಸಿದಿದೆ.

ಈ ವೇಳೆ ರಚನೆಯ ಮೇಲಿದ್ದ ಕೆಲವರು ಕೆಳಗೆ ಬಿದ್ದಿದ್ದು, ಒಟ್ಟು ನಾಲ್ವರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯ ವಿಡಿಯೋ ಇದೀಗ ಲಭ್ಯವಾಗಿದ್ದು, ಕಾರ್ಯಕ್ರಮದ ವೇಳೆ ನಡೆದ ಅವಘಡದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಘಟನೆಗೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಮಲ್ಲಾ ರೆಡ್ಡಿ ಇನ್ಸ್ಟಿಟ್ಯೂಟ್ನ ಆಡಳಿತ ಮಂಡಳಿ ಹಾಗೂ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮ ಆಯೋಜಿಸಿದ್ದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.