ತೀವ್ರ ಜ್ವರ: ನಟಿ ಮಮಿತಾ ಬೈಜು ಆಸ್ಪತ್ರೆಗೆ ದಾಖಲು, ಆಸ್ಟ್ರೇಲಿಯಾ ಪ್ರವಾಸ ರದ್ದು
ಬೆಂಗಳೂರು: ‘ಪ್ರೇಮಲು’ ಸೇರಿದಂತೆ ಜನಪ್ರಿಯ ಚಿತ್ರಗಳ ಮೂಲಕ ಗಮನ ಸೆಳೆದಿರುವ ಮಲಯಾಳಂ ನಟಿ ಮಮಿತಾ ಬೈಜು ತೀವ್ರ ಜ್ವರ ಹಾಗೂ ಮೈಕೈ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಆಸ್ಟ್ರೇಲಿಯಾಗೆ ತೆರಳಿ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಸೆಪ್ಟೆಂಬರ್ 5ರಂದು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ‘ಲೆಂಡಾಕ್ಸಿಸ್ ಕ್ಲೈಡ್ ಓಣಂ 2026’ ಕಾರ್ಯಕ್ರಮದಲ್ಲಿ ಮಮಿತಾ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕ್ಲೈಡ್ ಮಲಯಾಳಿ ಅಸೋಸಿಯೇಷನ್ ಕಾರ್ಯಕ್ರಮವನ್ನು ಮುಂದೂಡಿದೆ.
ಕಾರ್ಯಕ್ರಮದ ಹೊಸ ದಿನಾಂಕ ನಿಗದಿಪಡಿಸಲು ಆಯೋಜಕರು ಮಮಿತಾ ಅವರ ತಂಡ ಹಾಗೂ ಕಾರ್ಯಕ್ರಮದ ಸ್ಥಳದ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ವಿಡಿಯೋ ಸಂದೇಶದ ಮೂಲಕ ಅಭಿಮಾನಿಗಳು ಹಾಗೂ ಆಯೋಜಕರಿಗೆ ಮಾಹಿತಿ ನೀಡಿರುವ ಮಮಿತಾ, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರಯಾಣ ರದ್ದುಪಡಿಸಬೇಕಾಯಿತು ಎಂದು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಬರಲಾಗದಿರುವುದಕ್ಕೆ ಮಮಿತಾ ವಿಷಾದ ವ್ಯಕ್ತಪಡಿಸಿ, ಕ್ಲೈಡ್ ಮಲಯಾಳಿ ಅಸೋಸಿಯೇಷನ್ ಸದಸ್ಯರಲ್ಲಿ ಕ್ಷಮೆಯಾಚಿಸಿದ್ದಾರೆ. ಮತ್ತೊಂದು ಸಂದರ್ಭದಲ್ಲಿ ಕ್ಲೈಡ್ ಕುಟುಂಬವನ್ನು ಭೇಟಿ ಮಾಡುವ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.