ದೇಶದ 5.68 ಲಕ್ಷ ಹಳ್ಳಿಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮೀಕ್ಷೆ
ನವದೆಹಲಿ: ಗ್ರಾಮೀಣ ಡಿಜಿಟಲ್ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಂಚೆ ಇಲಾಖೆ (DoP) ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ದೇಶದ 5.68 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮೊಬೈಲ್ ನೆಟ್‌ವರ್ಕ್ ಕಾರ್ಯಕ್ಷಮತೆಯ ಕುರಿತು ಅತಿದೊಡ್ಡ ಗ್ರಾಮ ಮಟ್ಟದ ಸಮೀಕ್ಷೆ ನಡೆಸಲು ತಿಳುವಳಿಕೆ ಒಪ್ಪಂದ (MoU) ಮಾಡಿಕೊಂಡಿವೆ.
ಈ ಸಮೀಕ್ಷೆಯಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ (Vi) ಹಾಗೂ ಬಿಎಸ್‌ಎನ್‌ಎಲ್‌ನ ಮೊಬೈಲ್ ಸೇವೆಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಅಂಚೆ ಇಲಾಖೆಯ 1.40 ಲಕ್ಷಕ್ಕೂ ಹೆಚ್ಚು ಶಾಖಾ ಅಂಚೆ ಕಚೇರಿಗಳ ಜಾಲವನ್ನು ಬಳಸಿಕೊಂಡು ಗ್ರಾಮೀಣ ಡಾಕ್ ಸೇವಕರು (GDS) ತಮ್ಮ ದಿನನಿತ್ಯದ ಕಾರ್ಯದ ವೇಳೆ TRAI ಅಭಿವೃದ್ಧಿಪಡಿಸಿದ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ-ಸಮಯದ ಮಾಹಿತಿ ಸಂಗ್ರಹಿಸಲಿದ್ದಾರೆ.
ಈ ಸಮೀಕ್ಷೆಯ ಮುಖ್ಯ ಉದ್ದೇಶ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯ ಕೊರತೆಯನ್ನು ಗುರುತಿಸುವುದು, ಸೇವೆಯ ಗುಣಮಟ್ಟವನ್ನು ಅಳೆಯುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದೂರಸಂಪರ್ಕ ಮೂಲಸೌಕರ್ಯ ಸುಧಾರಣೆಗೆ ಅಗತ್ಯವಾದ ವಿಶ್ವಾಸಾರ್ಹ ಮಾಹಿತಿ ಒದಗಿಸುವುದಾಗಿದೆ.

ಒಂದು ವರ್ಷದ ಒಪ್ಪಂದದಡಿ ಅಂಚೆ ಇಲಾಖೆ ಕ್ಷೇತ್ರ ಸಮೀಕ್ಷೆ ನಡೆಸಲಿದ್ದು, TRAI ತಾಂತ್ರಿಕ ಬೆಂಬಲ, ಮೊಬೈಲ್ ಅಪ್ಲಿಕೇಶನ್, ಸಿಬ್ಬಂದಿಗೆ ತರಬೇತಿ ಹಾಗೂ ಕೇಂದ್ರೀಕೃತ ಮೇಲ್ವಿಚಾರಣೆ ಒದಗಿಸಲಿದೆ.
ಈ ಉಪಕ್ರಮದಿಂದ ಗ್ರಾಮೀಣ ಭಾರತದ ದೂರಸಂಪರ್ಕ ಸೇವೆಯ ಗುಣಮಟ್ಟ ಸುಧಾರಿಸುವುದರ ಜೊತೆಗೆ ಡಿಜಿಟಲ್ ಸಂಪರ್ಕದ ಅಂತರ ಕಡಿಮೆಯಾಗಿ, ಡಿಜಿಟಲ್ ಇಂಡಿಯಾ ಮಿಷನ್‌ಗೆ ಮತ್ತಷ್ಟು ಬಲ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.