ಪದ್ಮಶ್ರೀ ಪುರಸ್ಕೃತ ನಟ ನಾನಾ ಪಾಟೇಕರ್ ನಿಧನಕ್ಕೆ ಶ್ರದ್ದಾಂಜಲಿಯ ಮಹಾಪೂರ
ಬೆಂಗಳೂರು: ಹಿರಿಯ ನಟ, ಪದ್ಮಶ್ರೀ ಪುರಸ್ಕೃತ ನಾನಾ ಪಾಟೇಕರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ವ್ಯಕ್ತಪಡಿಸಿ, ನಾನಾ ಪಾಟೇಕರ್ ಅವರ ವಿಶಿಷ್ಟ ಅಭಿನಯ ಸಾಮರ್ಥ್ಯ ಹಾಗೂ ವಿಭಿನ್ನ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ.
“ತೀವ್ರತೆ, ವೈಯಕ್ತಿಕ ಶೈಲಿ ಹಾಗೂ ವಿಶಿಷ್ಟ ಉಪಸ್ಥಿತಿಯನ್ನು ಹೊಂದಿದ್ದ ಕೆಲವೇ ನಟರಲ್ಲಿ ನಾನಾ ಪಾಟೇಕರ್ ಅವರೂ ಒಬ್ಬರು. ಪ್ರತಿಯೊಂದು ಪಾತ್ರಕ್ಕೂ ಅವರು ಅಪಾರ ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ತಂದಿದ್ದರು. ಅವರು ನಿರ್ವಹಿಸಿದ ಪಾತ್ರಗಳು ಹಲವು ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯಲಿವೆ. ತಮ್ಮ ನಂಬಿಕೆ ಹಾಗೂ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ನೇರ ನಡೆಗೂ ಅವರು ಹೆಸರಾಗಿದ್ದರು” ಎಂದು ಮೋದಿ ಹೇಳಿದ್ದಾರೆ.
ಹಿಂದಿ ಹಾಗೂ ಮರಾಠಿ ಚಿತ್ರರಂಗಕ್ಕೆ ನಾನಾ ಪಾಟೇಕರ್ ನೀಡಿದ ಕೊಡುಗೆ ಅಪಾರ. ಅವರ ನಿಧನದಿಂದ ತುಂಬಲಾರದ ಶೂನ್ಯ ಉಂಟಾಗಿದೆ. ಕುಟುಂಬ, ಸ್ನೇಹಿತರು ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಸಂತಾಪಗಳು ಎಂದು ಪ್ರಧಾನಿ ತಿಳಿಸಿದ್ದಾರೆ.

‘ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ’
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಾನಾ ಪಾಟೇಕರ್ ಅವರನ್ನು ಅದ್ಭುತ ನಟ ಹಾಗೂ ರಾಷ್ಟ್ರಪ್ರೇಮಿ ಎಂದು ಸ್ಮರಿಸಿದ್ದಾರೆ.
‘ಪರಿಂದಾ’, ‘ಕ್ರಾಂತಿವೀರ್’, ‘ನಟಸಾಮ್ರಾಟ್’, ‘ಪ್ರಹಾರ್’, ‘ಅಗ್ನಿಸಾಕ್ಷಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನೀಡಿದ ಅಭಿನಯವನ್ನು ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ. ‘ನಾಮ್ ಫೌಂಡೇಶನ್’ ಮೂಲಕ ರೈತರು ಹಾಗೂ ಗ್ರಾಮೀಣ ಜನರಿಗಾಗಿ ನಾನಾ ಪಾಟೇಕರ್ ತೋರಿದ ಕಾಳಜಿಯನ್ನೂ ಸ್ಮರಿಸಿದ್ದಾರೆ.
“ಸಹಜ ಅಭಿನಯ ಹಾಗೂ ಕಂಚಿನ ಕಂಠದ ಸಂಭಾಷಣೆಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಮಹಾನ್ ಕಲಾವಿದ ಅವರು. ಅವರ ಅಗಲಿಕೆ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ” ಎಂದು ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಕನ್ನಡದ ‘ಯಕ್ಷ’ ಚಿತ್ರವನ್ನೂ ಸ್ಮರಿಸಿದ ಡಿ.ಕೆ. ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ ಎಂದು ಹೇಳಿದ್ದಾರೆ.
ವಿಭಿನ್ನ ಹಾಗೂ ಮನೋಜ್ಞ ಅಭಿನಯದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ನಾನಾ ಪಾಟೇಕರ್ ಅವರು ಕನ್ನಡದ ‘ಯಕ್ಷ’ ಚಿತ್ರದಲ್ಲಿಯೂ ಅಭಿನಯಿಸಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ, ಬಂಧು-ಬಳಗ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಡಿ.ಕೆ. ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.