ವೇವ್ಸ್ ಫಿಲ್ಮ್ ಬಜಾರ್‌ಗೆ 20ರ ಸಂಭ್ರಮ: ಭಾರತೀಯ ಸಿನಿಮಾಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆಯ ಗುರಿ
ಪಣಜಿ: ಭಾರತೀಯ ಸಿನಿಮಾವನ್ನು ಜಾಗತಿಕ ಚಿತ್ರರಂಗದೊಂದಿಗೆ ಸಂಪರ್ಕಿಸುವ ಉದ್ದೇಶ ಹೊಂದಿರುವ ವೇವ್ಸ್ ಫಿಲ್ಮ್ ಬಜಾರ್ ತನ್ನ 20ನೇ ಆವೃತ್ತಿಯನ್ನು ನವೆಂಬರ್ 20ರಿಂದ 24ರವರೆಗೆ ಗೋವಾದ ತಾಜ್ ಸಿಡೇಡ್ ಡಿ ಗೋವಾ ಹಾರಿಜಾನ್‌ನಲ್ಲಿ ಆಯೋಜಿಸಲಿದೆ. 57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಜತೆಗೆ ಈ ಕಾರ್ಯಕ್ರಮ ನಡೆಯಲಿದೆ.
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) 2007ರಲ್ಲಿ ಆರಂಭಿಸಿದ ಈ ವೇದಿಕೆ, ಚಲನಚಿತ್ರ ನಿರ್ಮಾಪಕರು, ಹಣಕಾಸುದಾರರು, ವಿತರಕರು ಮತ್ತು ಉತ್ಸವಗಳ ಆಯೋಜಕರನ್ನು ಸಂಪರ್ಕಿಸುವ ಅಂತರರಾಷ್ಟ್ರೀಯ ವೇದಿಕೆಯಾಗಿ ಬೆಳೆದಿದೆ.

2026ರ ಆವೃತ್ತಿಯಲ್ಲಿ ಸಹ-ನಿರ್ಮಾಣ ಮಾರುಕಟ್ಟೆ, ಚಿತ್ರಕಥೆಗಾರರ ಪ್ರಯೋಗಾಲಯ, ವೀಕ್ಷಣಾ ಕೊಠಡಿ, ಮಾರುಕಟ್ಟೆ ಪ್ರದರ್ಶನಗಳು ಮತ್ತು ನಿರ್ಮಾಪಕರ ಪ್ರಯೋಗಾಲಯ ಇರಲಿವೆ. ಜ್ಞಾನ ಸರಣಿಯಲ್ಲಿ ಉದ್ಯಮ ತಜ್ಞರು ವಿತರಣೆ, ವ್ಯವಹಾರ ಮಾದರಿ ಮತ್ತು ಅಂತರರಾಷ್ಟ್ರೀಯ ಸಹಯೋಗಗಳ ಕುರಿತು ಚರ್ಚಿಸಲಿದ್ದಾರೆ.
‘ದಿ ಲಂಚ್‌ಬಾಕ್ಸ್’, ‘ಕೋರ್ಟ್’, ‘ನ್ಯೂಟನ್’, ‘ಮಾಂಟೋ’, ‘ತಿಥಿ’, ‘ಗರ್ಲ್ಸ್ ವಿಲ್ ಬಿ ಗರ್ಲ್ಸ್’ ಮತ್ತು ‘ಕ್ಯಾಕ್ಟಸ್ ಪಿಯರ್ಸ್’ ಸೇರಿದಂತೆ ಹಲವು ಚಿತ್ರಗಳ ಪಯಣದಲ್ಲಿ ಫಿಲ್ಮ್ ಬಜಾರ್ ಪಾತ್ರ ವಹಿಸಿದೆ. ಎನ್‌ಎಫ್‌ಡಿಸಿ 21 ಪ್ರಾದೇಶಿಕ ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಿಗೆ ಆರ್ಥಿಕ ನೆರವು ನೀಡಿದೆ.
ಸಹ-ನಿರ್ಮಾಣ, ಮಾರ್ಗದರ್ಶನ, ಹಣಕಾಸು ಮತ್ತು ವಿತರಣೆಯ ಮೂಲಕ ಭಾರತೀಯ ಹಾಗೂ ದಕ್ಷಿಣ ಏಷ್ಯಾದ ಚಿತ್ರಗಳಿಗೆ ಜಾಗತಿಕ ಅವಕಾಶಗಳನ್ನು ವಿಸ್ತರಿಸುವುದು ಈ ವೇದಿಕೆಯ ಗುರಿಯಾಗಿದೆ.