ಸಂಸದೀಯ ಸಹಕಾರ, ಔಷಧ-ಕೈಗಾರಿಕಾ ಸಹಭಾಗಿತ್ವ; ಭಾರತ–ಈಜಿಪ್ಟ್ ನಿಯೋಗ ಜೊತೆ ಓಂ ಬಿರ್ಲಾ ಚರ್ಚೆ
ನವದೆಹಲಿ: 12ನೇ ಬ್ರಿಕ್ಸ್ ಸಂಸದೀಯ ವೇದಿಕೆ–2026ಕ್ಕೂ ಮುನ್ನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈಜಿಪ್ಟ್ ನಿಯೋಗದ ಮುಖ್ಯಸ್ಥ ಸಮೇಹ್ ಶೌಕ್ರಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ಬಲಪಡಿಸುವ ಕುರಿತು ಚರ್ಚಿಸಿದರು.
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಈಜಿಪ್ಟ್ ಭೇಟಿಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಹೊಸ ವೇಗ ದೊರೆತಿದೆ ಎಂದು ಬಿರ್ಲಾ ಹೇಳಿದರು.
ಸಂಸದೀಯ ಸ್ನೇಹ ಗುಂಪುಗಳ ಮೂಲಕ ಸಹಕಾರ ವಿಸ್ತರಿಸುವುದು ಹಾಗೂ ಔಷಧ, ರಾಸಾಯನಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಸಹಭಾಗಿತ್ವ ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಈಜಿಪ್ಟ್ ಖಂಡಿಸಿದ್ದನ್ನು ಬಿರ್ಲಾ ಶ್ಲಾಘಿಸಿದರು. ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಒಗ್ಗಟ್ಟಿನ ಪ್ರಯತ್ನಗಳು ಅಗತ್ಯವೆಂದು ಒತ್ತಿಹೇಳಿದರು.
ಉಭಯ ದೇಶಗಳ ನಡುವಿನ ಸಂಸದೀಯ ಸಂಪರ್ಕ ಬಲಗೊಳ್ಳುವುದರಿಂದ ಪರಸ್ಪರ ಸಹಕಾರ ಹೆಚ್ಚುವುದರ ಜೊತೆಗೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಗುರಿಗಳನ್ನು ಸಾಧಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.