Skip to content
ANU News
ANU News
  • Home
  • Home
ANU News
ANU News
  • Home
  • Home
ಪ್ರಾದೇಶಿಕ

ಅಡ್ಡ ಮತದಾನ ವಿಚಾರಕ್ಕೆ ಬಿಜೆಪಿ ಹೈಕಮಾಂಡ್ ಗರಂ; ರಾಜ್ಯ ನಾಯಕರಿಗೆ ಪ್ರಶ್ನೆಗಳ ಸುರಿಮಳೆ

By ANU News
June 24, 2026 1 Min Read
0

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣದ ಕುರಿತು ವರಿಷ್ಠರಿಗೆ ವರದಿ ನೀಡಲು ನವದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಪಕ್ಷದ ಹೈಕಮಾಂಡ್ ತೀವ್ರ ತರಾಟೆ ತೆಗೆದುಕೊಂಡಿದೆ ಎನ್ನಲಾಗಿದೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುಮಾರು 45 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಉಪಸ್ಥಿತಿಯಲ್ಲೇ ಚುನಾವಣಾ ಸಿದ್ಧತೆ ಮತ್ತು ಮತದಾನ ನಿರ್ವಹಣೆ ಕುರಿತು ರಾಜ್ಯ ನಾಯಕರಿಂದ ವಿವರವಾದ ಮಾಹಿತಿ ಪಡೆಯಲಾಗಿದೆ.

ಸಭೆಯಲ್ಲಿ ಹೈಕಮಾಂಡ್ ನಾಯಕರು, ಚುನಾವಣೆ ಘೋಷಣೆಯಾದ ಬಳಿಕ ಎಷ್ಟು ಸಭೆಗಳನ್ನು ನಡೆಸಿದ್ದೀರಿ, ಶಾಸಕಾಂಗ ಪಕ್ಷದ ಸಭೆ ಯಾವಾಗ ಆಯೋಜಿಸಿದ್ದೀರಿ, ಮತಗಳ ಹಂಚಿಕೆ ಹೇಗೆ ಮಾಡಿದ್ದೀರಿ, ಶಾಸಕರಿಗೆ ವಿಪ್ ಯಾವಾಗ ನೀಡಿದ್ದೀರಿ ಹಾಗೂ ಜೆಡಿಎಸ್ ಜತೆ ಎಷ್ಟು ಬಾರಿ ಸಮನ್ವಯ ಸಭೆ ನಡೆಸಿದ್ದೀರಿ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಅಡ್ಡ ಮತದಾನದ ಸಾಧ್ಯತೆ ಬಗ್ಗೆ ಅನುಮಾನ ಇದ್ದ ಶಾಸಕರೊಂದಿಗೆ ಹೆಚ್ಚುವರಿ ಮಾತುಕತೆ ನಡೆಸಲಾಗಿತ್ತೇ, ಶಾಸಕಾಂಗ ಪಕ್ಷದ ಸಭೆಯನ್ನು ಎರಡು-ಮೂರು ದಿನ ಮುಂಚಿತವಾಗಿ ನಡೆಸಬಹುದಿತ್ತಲ್ಲವೇ ಎಂಬ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ನಾಯಕರು, ಅಭ್ಯರ್ಥಿಗಳಿಗೆ 30 ಮತಗಳ ಗುರಿ ನಿಗದಿಪಡಿಸಲಾಗಿತ್ತು, ಪ್ರತಿಯೊಬ್ಬ ಶಾಸಕರೊಂದಿಗೆ ವೈಯಕ್ತಿಕವಾಗಿ ಮಾತನಾಡಿ ವಿಪ್ ನೀಡಲಾಗಿತ್ತು ಹಾಗೂ ಕಾಂಗ್ರೆಸ್‌ಗೆ ಮಾಹಿತಿ ಸೋರಿಕೆಯಾಗದಂತೆ ಕೊನೆಯ ಕ್ಷಣದಲ್ಲಿ ವಿಪ್ ಜಾರಿ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ ಎನ್ನಲಾಗಿದೆ.

ಹಣದ ಆಮಿಷದ ಮೂಲಕ ಅಡ್ಡ ಮತದಾನ ನಡೆದಿರುವ ಶಂಕೆಯನ್ನೂ ರಾಜ್ಯ ನಾಯಕರು ವರಿಷ್ಠರ ಗಮನಕ್ಕೆ ತಂದಿದ್ದಾರೆ. ಜೆಡಿಎಸ್‌ಗೆ ಸಂಪೂರ್ಣ ಮಾಹಿತಿ ನೀಡಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಸಭೆಯ ಅಂತ್ಯದಲ್ಲಿ ಹೈಕಮಾಂಡ್, ಸಿ.ಟಿ. ರವಿ ನೇತೃತ್ವದ ಸಮಿತಿಯ ವರದಿಯನ್ನು ಶೀಘ್ರ ಸಲ್ಲಿಸುವಂತೆ ಸೂಚಿಸಿದ್ದು, ಅಗತ್ಯವಿದ್ದರೆ ಮತ್ತೆ ದೆಹಲಿಗೆ ಕರೆಯಲಾಗುವುದು ಎಂದು ತಿಳಿಸಿದೆ ಎನ್ನಲಾಗಿದೆ. ಅಲ್ಲದೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇನ್ನಷ್ಟು ಪೂರ್ವಸಿದ್ಧತೆ ನಡೆಸಬಹುದಾಗಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಬೆಳವಣಿಗೆಗಳ ನಡುವೆ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ನಿರ್ಧಾರದಿಂದ ರಾಜ್ಯ ನಾಯಕರು ಹಿಂದೆ ಸರಿದಿದ್ದು, ಹೈಕಮಾಂಡ್ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Author

ANU News

Follow Me
Other Articles
Previous

ಕಬ್ಬನ್ ಪಾರ್ಕ್ ತಾಂತ್ರಿಕ ದೋಷ ಸರಿಪಡಿಕೆ: ನೇರಳೆ ಮಾರ್ಗದ ಮೆಟ್ರೋ ಸಂಚಾರ ಯಥಾಸ್ಥಿತಿಗೆ

Next

ಪದ್ಮ ಪ್ರಶಸ್ತಿ 2026 ಪ್ರದಾನ: ಕರ್ನಾಟಕದ ಐವರು ಸಾಧಕರಿಗೆ ರಾಷ್ಟ್ರಪತಿ ಗೌರವ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಇರಾನ್ ವಿರುದ್ಧದ ಸಂಘರ್ಷ: ಟ್ರಂಪ್ ಆಡಳಿತಕ್ಕೆ ಸೆನೆಟ್‌ನಿಂದಲೇ ಆಘಾತ
    • ‘ನೀಟ್’ ಹಚ್ಚಿದ ಕಿಚ್ಚು; ಕೇಂದ್ರದ ವಿರುದ್ಧ ದೇಶವ್ಯಾಪಿ ‘ಛತ್ರೋಂ ಕಿ ಗೂಂಜ್’ ಅಭಿಯಾನಕ್ಕೆ ಕಾಂಗ್ರೆಸ್ ಮುನ್ನುಡಿ
    • ‘ತೇರಾ ಯಾರ್ ಹೂ ಮೈ’ ಜುಲೈ 24ಕ್ಕೆ ಬಿಡುಗಡೆ: ಹೀಗಿದೆ ಶೀರ್ಷಿಕೆ ಗೀತೆಯ ಟೀಸರ್
    • ಎಲ್ ನಿನೋ ಆತಂಕ: 315 ಜಿಲ್ಲೆಗಳಿಗೆ ಕೇಂದ್ರದ ಖಾರಿಫ್ ತುರ್ತು ಯೋಜನೆ
    • ಜೂನ್ 28ರ ನಂತರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ; ಪ್ರಮುಖರೊಬ್ಬರಿಗೆ ಸ್ಪೀಕರ್ ಹುದ್ದೆ
    Copyright 2026 — ANU News. All rights reserved. Blogsy WordPress Theme